
ಭಾರೀ ಅಚ್ಚರಿಗೀಡು ಮಾಡುವ ಟ್ವೀಟ್ ಒಂದರಲ್ಲಿ, ಫಾಸ್ಟ್ಫುಡ್ ದಿಗ್ಗಜ ಬರ್ಗರ್ ಕಿಂಗ್ ತನ್ನ ಪೈಪೋಟಿದಾರನಾದ ಮ್ಯಾಕ್ ಡೊನಾಲ್ಡ್ಸ್ ಹಾಗೂ ಇನ್ನಿತರ ರೆಸ್ಟೋರೆಂಟ್ ಗಳಿಂದ ಆರ್ಡರ್ ಮಾಡಲು ತನ್ನ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.
ಬರ್ಗರ್ ಕಿಂಗ್ನ ಬ್ರಿಟನ್ ಶಾಖೆ ಹೀಗೆ ಮಾಡಿದ್ದು, ಕೋವಿಡ್-19 ಸಾಂಕ್ರಮಿಕದ ವೇಳೆ ಸ್ಥಳೀಯ ವ್ಯಾಪಾರಕ್ಕೆ ನೆರವಾಗಲು ತನ್ನ ಗ್ರಾಹಕರಲ್ಲಿ ವಿನಂತಿಸಿಕೊಂಡಿದೆ.
“ನಾವು ನಿಮ್ಮಲ್ಲಿ ಹೀಗೆ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ಯಾವತ್ತೂ ಸಹ ಅಂದುಕೊಂಡಿರಲಿಲ್ಲ. ಆದರೆ, ಸಾವಿರಾರು ಜನರಿಗೆ ಕೆಲಸ ಕೊಟ್ಟಿರುವ ರೆಸ್ಟೋರೆಂಟ್ ಗಳಿಗೆ ನಿಮ್ಮ ನೆರವು ಈಗ ಬೇಕಿದೆ” ಎಂದು ಬರ್ಗರ್ ಕಿಂಗ್ ಭಿನ್ನವಿಸಿಕೊಂಡಿದೆ.
ಮ್ಯಾಕ್ಡೊನಾಲ್ಡ್ಸ್, ಕೆಎಫ್ಸಿ, ಪಿಜ್ಜಾ ಹಟ್, ಡಾಮಿನೋಸ್ ಅಲ್ಲದೇ ಸ್ಥಳೀಯ ಮಟ್ಟದಲ್ಲಿ ಸ್ವಾತಂತ್ರ್ಯವಾಗಿ ಕೆಲಸ ಮಾಡುವ ಸಾಕಷ್ಟು ರೆಸ್ಟೋರೆಂಟ್ ಗಳಿಂದ ಆರ್ಡರ್ ಮಾಡಿಸಿಕೊಂಡು ತಿನ್ನುವ ಮೂಲಕ ಅವುಗಳ ಬ್ಯುಸಿನೆಸ್ಗೆ ನೆರವಾಗಲು ಗ್ರಾಹಕರಲ್ಲಿ ಕೇಳಿಕೊಂಡಿದೆ ಬರ್ಗರ್ ಕಿಂಗ್.