ಚಂದ್ರನ ಮೇಲೆ 4ಜಿ ಸೆಲ್ಯುಲಾರ್ ನೆಟ್ವರ್ಕ್ ಸ್ಥಾಪಿಸಲು ಮುಂದಾಗಿರುವ ನಾಸಾ, ನೋಕಿಯಾ ಸಂಸ್ಥೆಗೆ ಗುತ್ತಿಗೆಯನ್ನ ನೀಡಿದೆ. ಇದಕ್ಕಾಗಿ ನಾಸಾ ನೋಕಿಯಾ ಕಂಪನಿಗೆ 14.1 ಮಿಲಿಯನ್ ಡಾಲರ್ ಹಣವನ್ನ ನೀಡಿದೆ.
ಈ ಮೊತ್ತವು 2775 ಕೋಟಿ ರೂಪಾಯಿ ಮೌಲ್ಯ ಟಿಪ್ಪಿಂಗ್ ಪಾಯಿಂಟ್ ಎಂಬ ಯೋಜನೆಯ ಒಂದು ಭಾಗವಾಗಿದೆ. ಬಾಹ್ಯಾಕಾಶ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಈ ಯೋಜನೆಯನ್ನ ರೂಪಿಸಲಾಗಿದೆ.
ಈ ಯೋಜನೆಯು ಯಶಸ್ವಿಯಾದಲ್ಲಿ ಚಂದ್ರನ ಮೇಲೆ ಮೊಬೈಲ್ ನೆಟ್ವರ್ಕ್ ಸಿಗಲಿದ್ದು, ಇದರಿಂದ ಭೂಮಿ ಹಾಗೂ ಚಂದ್ರನ ನಡುವೆ ಸಂಪರ್ಕ ಇನ್ನಷ್ಟು ನಿಕಟವಾಗಲಿದೆ.
ಯುನೈಟೆಡ್ ಪ್ರೆಸ್ ಇಂಟರ್ನ್ಯಾಷನಲ್ ನೀಡಿರುವ ಮಾಹಿತಿಯ ಪ್ರಕಾರ 2028ರ ವೇಳೆಗೆ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲೇ ಕೂತು ಸಂಶೋಧನೆಗಳನ್ನ ನಡೆಸಬಹುದಾಗಿದೆ. ಹೀಗಾಗಿ ನಾಸಾ, ಚಂದ್ರನ ಮೇಲೆ ವಾಸಿಸಲು ಹಾಗೂ ಕೆಲಸ ಮಾಡಲು ಯೋಗ್ಯವಾಗುವ ರೀತಿಯಲ್ಲಿ ತಂತ್ರಜ್ಞಾನವನ್ನ ಅಭಿವೃದ್ಧಿಪಡಿಸುತ್ತಿದೆ ಎಂದು ನಾಸಾ ಆಡಳಿತಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಹೇಳಿದ್ದಾರೆ.
ಚಂದ್ರನ ಅಂಗಳದಲ್ಲಿ 4ಜಿ ನೆಟ್ವರ್ಕ್ ಸ್ಥಾಪನೆ ಮಾಡುವ ನೋಕಿಯಾದ ಈ ಪ್ರಯತ್ನ ಇದೇ ಮೊದಲೇನಲ್ಲ. ಈ ಹಿಂದೆ ಜರ್ಮನ್ ಬಾಹ್ಯಾಕಾಶ ಸಂಸ್ಥೆ ವಿಜ್ಞಾನಿಗಳ ಹಾಗೂ ವೋಡಾಫೋನ್ ಜೊತೆ ಸೇರಿ 2018ರಲ್ಲಿ ಇಂತಹದ್ದೇ ಒಂದು ಯೋಜನೆಯನ್ನ ಹಾಕಲಾಗಿತ್ತು. ಆದರೆ ಈ ಯೋಜನೆ ಯಶಸ್ವಿಯಾಗಿರಲಿಲ್ಲ.