ಕೆಲವು ಕಿಡಿಗೇಡಿಗಳ ಕಲ್ಲೆಸೆತಕ್ಕೆ ಹಂಸದ ಕುಟುಂಬವೊಂದು ದಾರುಣವಾಗಿ ಅಂತ್ಯ ಕಂಡ ಘಟನೆ ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್ ಪ್ರದೇಶದ ನಾಲೆಯ ಸಮೀಪ ನಡೆದಿದೆ.
ಒಟ್ಟು 6 ಮೊಟ್ಟೆಯಿಟ್ಟು, ಮರಿ ಮಾಡುವ ಹಂತದಲ್ಲಿದ್ದ ಹಂಸದ ಗೂಡಿಗೆ ಮೊದಲು ನಾಯಿಗಳ ಭಯವಿತ್ತು. ನಂತರ ಕೆಲ ಕಿಡಿಗೇಡಿ ಯುವಕರು ಅವುಗಳ ಮೇಲೆ ನಿರಂತರವಾಗಿ ಕಲ್ಲೆಸೆಯಲಾರಂಬಿಸಿದರು.
ಗೂಡಿನಲ್ಲಿದ್ದ ಆರರಲ್ಲಿ ಮೂರು ಮೊಟ್ಟೆಗಳು ಉಳಿದಿದ್ದವು. ಇದರಿಂದ ಘಾಸಿಗೊಂಡ ತಾಯಿ ಹಂಸ ಮೃತಪಟ್ಟಿತು. ಅದೇ ಕೊರಗಿನಲ್ಲಿ ನಂತರ ಮೂರ್ನಾಲ್ಕು ದಿನಗಳಿಂದ ತಂದೆ ಹಂಸವೂ ನಾಪತ್ತೆಯಾಗಿದೆ. ಆರರಲ್ಲಿ ಈಗ ಒಂದೇ ಮೊಟ್ಟೆ ಉಳಿದುಕೊಂಡಿದೆ.
ಮ್ಯಾಂಚೆಸ್ಟರ್‌ನ ಖಗ ಪ್ರಿಯರು ಕಿಡಿಗೇಡಿಗಳ ಈ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾನು 12 ವಾರಗಳಿಂದ ಹಂಸದ ಕುಟುಂಬವನ್ನು ವೀಕ್ಷಿಸುತ್ತಿದ್ದೆ. ಮೊದಲು ಪ್ರಾಣಿ, ಪಕ್ಷಿಗಳ ಕಾಟವಾದರೆ, ಈಗ ಮಾನವರ ಕಾಟದಿಂದ ಕುಟುಂಬ ಅಂತ್ಯವಾಗಿದೆ’ ಎಂದು ಮೈಕಲ್ ಜಾನ್ಸನ್ ಎಂಬುವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಮಕ್ಕಳಾಗಬೇಕಿದ್ದ ಮೊಟ್ಟೆಗಳ ನಾಶದಿಂದ ಬೇಸರಗೊಂಡು ಹಂಸ ಮೃತಪಟ್ಟಿರಬಹುದು ಎಂದು ಪರಿಸರ ಕಾರ್ಯಕರ್ತ ಸ್ಯಾಮ್ ವುಡ್ರೋವ್ ಹೇಳಿದ್ದಾರೆ.