ತಾನೇ ಜನ್ಮ ನೀಡಿದ ಮಗಳನ್ನೇ ಕೊಂದ ತಾಯಿಗೆ 20 ವರ್ಷ ಜೈಲು ಶಿಕ್ಷೆಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿ ಜರುಗಿದೆ.
ಟಿಯಾಂಡ್ರಾ ಕ್ರಿಸ್ಟನ್ (23) ಹೆಸರಿನ ಈ ಮಹಿಳೆ ಎರಡೂವರೆ ವರ್ಷದ ತನ್ನ ಮಗಳನ್ನು ಕೊಂದಿದ್ದಲ್ಲದೇ ಮಗುವಿನ ದೇಹವನ್ನು ಕೆರೆಯಲ್ಲಿ ಎಸೆದಿದ್ದಾಳೆ. ಆಕೆ ಮಾಡಿದ ತಪ್ಪಿಗೆ ಈಗ ಕಂಬಿ ಎಣಿಸುತ್ತಿದ್ದಾಳೆ.
ತನ್ನ ಬಾಯ್ಫ್ರೆಂಡ್ ಕೆನ್ನಿ ಹೆವೆಟ್ ನೆರವಿನಿಂದ 2018ರಲ್ಲಿ ತನ್ನ ಮಗಳು ಹಜಾನಾಳನ್ನು ಕೊಂದಿದ್ದಾಳೆ ಟಿಯಾಂಡ್ರಾ. ಮಗುವಿನ ಕೊಲೆಯನ್ನು ಮುಚ್ಚಿಡಲು, ಆಕೆಯಷ್ಟೇ ಗಾತ್ರದ ಗೊಂಬೆಯೊಂದನ್ನು ಖರೀದಿಸಿ ತಂದು ಅದಕ್ಕೆ ಬಟ್ಟೆ ಹಾಕಿದ್ದಾಳೆ ಟಿಯಾಂಡ್ರಾ. ಹೂಸ್ಟನ್ನ ಹೋಟೆಲ್ ಕೋಣೆಯೊಂದರಲ್ಲಿ ಇಬ್ಬರೂ ಪ್ರೇಮಿಗಳು ಸೇರಿಕೊಂಡು ಮಗುವನ್ನು ಕೊಂದಿದ್ದಾರೆ.
ಮಗುವಿನ ದೇಹವನ್ನು ಕೆರೆಯಲ್ಲಿ ಎಸೆದ ಬಳಿಕ ಅನೇಕ ದಿನಗಳ ಮಟ್ಟಿಗೆ ಗೊಂಬೆಯನ್ನು ಕಂಕುಳಲ್ಲಿ ಕಟ್ಟಿಕೊಂಡು ಓಡಾಡಿದ ಟಿಯಾಂಡ್ರಾ, ಕೆಲವು ದಿನಗಳ ಬಳಿಕ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲಿಸರಿಗೆ ದೂರು ಕೊಟ್ಟಿದ್ದಳು.