ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳ ತಜ್ಞರು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಹಲವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಮಾರುಕಟ್ಟೆಗೆ ಲಸಿಕೆ ಬಿಡುಗಡೆ ಮಾಡಲು ರೆಡಿಯಾಗಿವೆ.
ಅಮೆರಿಕದ ಮಾಡೆರ್ನಾ ಕಂಪನಿಯ ಲಸಿಕೆ ಹಿರಿಯರನ್ನು ಕೂಡ ಕೊರೋನಾ ಸೋಂಕಿನಿಂದ ಕಾಪಾಡಬಲ್ಲದು ಎನ್ನುವುದು ಪ್ರಯೋಗದಲ್ಲಿ ಗೊತ್ತಾಗಿದೆ. ಮನುಷ್ಯರ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಲಸಿಕೆ ಗುರುತಿಸಿ ಪ್ರತಿಯಾಗಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಮೊದಲ ಹಂತದ ಫಲಿತಾಂಶದಲ್ಲಿ ಹಿರಿಯರಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಕಾಯಗಳು ಮತ್ತು ವೈರಸ್ ಕೊಲ್ಲುವ ಸೆಲ್ ಗಳು ಉತ್ಪಾದನೆಯಾಗಿರುವುದು ಕಂಡುಬಂದಿದೆ. ಕಡಿಮೆ ವಯಸ್ಸಿನವರಲ್ಲಿ ಕೊರೋನಾ ಸೋಂಕು ತಡೆಯುವ ಸಾಮರ್ಥ್ಯ ವೃದ್ಧಿಯಾಗಿರುವುದು ಗೊತ್ತಾಗಿದೆ.
ಸಾಮಾನ್ಯವಾಗಿ ಹಿರಿಯರಲ್ಲಿ ಪ್ರತಿರೋಧಕ ಶಕ್ತಿ ಕುಂದಿರುತ್ತದೆ. ಪ್ರಯೋಗದಲ್ಲಿ ಕಂಡುಬಂದಿರುವ ಫಲಿತಾಂಶದ ಆಧಾರದಲ್ಲಿ ಹಿರಿಯರಲ್ಲಿಯು ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಲಸಿಕೆ ಪ್ರಯೋಗದ ವೇಳೆ ನೀಡಲಾದ ಚುಚ್ಚುಮದ್ದಿನಿಂದ ಕೆಲವೊಮ್ಮೆ ಅಡ್ಡಪರಿಣಾಮ ಉಂಟಾಗಿರುವ ಬಗ್ಗೆಯೂ ಗೊತ್ತಾಗಿದೆ. ಕೆಲವರಿಗೆ ಸುಸ್ತಾಗಿದ್ದರೆ, ಮತ್ತೆ ಕೆಲವರಿಗೆ ಶೀತದ ಲಕ್ಷಣಗಳು ಕಂಡು ಬಂದಿದೆ. ಲಸಿಕೆ ಪಡೆದವರು 2 ದಿನಗಳಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.