ಬ್ರಿಟನ್: 2020 ಹಲವರ ಪಾಲಿಗೆ ಸಂಕಷ್ಟದ ಕಾಲ. ಆದರೆ, ಬ್ರಿಟಿಷ್ ವ್ಯಕ್ತಿಯೊಬ್ಬರಿಗೆ ಖುಷಿ ನೀಡಿದ ವರ್ಷವಾಗಿದೆ. ಏಕೆಂದರೆ, 2019 ರಲ್ಲಿ ಕಾಣೆಯಾಗಿದ್ದ ಅವರ ಮಗು ಹಾಗೂ ತಾಯಿ ಪತ್ತೆಯಾಗಿದ್ದಾರೆ.
ಬ್ರಿಟನ್ ಕೆಂಟ್ ದೇಶದ ವ್ಯಕ್ತಿ ಬೆಂಜಮಿನ್ ಬಿಂದ್ರಾ ಅವರ 2 ವರ್ಷದ ಪುತ್ರ ಇಮ್ಯಾನ್ಯುವಲ್ ಬಿಂದ್ರಾ ಹಾಗೂ ಆತನ 34 ವರ್ಷದ ತಾಯಿ ಜರ್ಮನಿಯ ಕ್ರಿಸ್ಟಿನಾ ನೋಬೀಸ್ 2019 ರ ಡಿಸೆಂಬರ್ 1 ರಿಂದ ನಾಪತ್ತೆಯಾಗಿದ್ದರು. ಬೆಂಜಮಿನ್ ಬಿಂದ್ರಾ ಈ ಸಂಬಂಧ ಯುನೈಟೆಡ್ ಕಿಂಗ್ಡಮ್ ಪೊಲೀಸರಿಗೆ ದೂರು ನೀಡಿದ್ದರು.
ತಾಯಿ, ಮಗ ಈ ವಾರ ಪತ್ತೆಯಾಗಿದ್ದಾಗಿ ಯುಕೆ ಹೈಕೋರ್ಟ್ ನ ಕೌಟುಂಬಿಕ ವಿಭಾಗ ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಬೆಂಜಮಿನ್ ಹಾಗೂ ಕ್ರಿಸ್ಟಿನಾ ಇಬ್ಬರೂ ವಿಚ್ಛೇದಿತರು. ಮಗು ತಂದೆಯ ಬಳಿ ಇತ್ತು. ಕ್ರಿಸ್ಟಿನಾ ಡಿ.1 ರಂದು ಟನ್ ಬ್ರಿಜ್ ವೆಲ್ಸ್ ಹೋಟೆಲ್ ನಲ್ಲಿ ತನ್ನ ಮಗುವಿನ ಜತೆ ಕಾಲ ಕಳೆಯಲು ಯೋಜಿಸಿದ್ದರು. ಅಲ್ಲಿಂದಲೇ ತಾಯಿ, ಮಗು ಇಬ್ಬರೂ ನಾಪತ್ತೆಯಾಗಿದ್ದರು. ತಂದೆ ಬೆಂಜಮಿನ್ ಮಗುವಿನ ಬಗ್ಗೆ ಚಿಂತಿತರಾಗಿದ್ದರು. ಹೇಗಾದರೂ ಮಗುವನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಹೈಕೋರ್ಟ್ ಜಸ್ಟಿಸ್ ಪೀಲ್ ಅವರೂ ಬೆಂಜಮಿನ್ ಪರವಾಗಿ ಮನವಿ ಮಾಡಿದ್ದರು. ಕ್ರಿಸ್ಟಿನಾ ಜರ್ಮನಿ, ಮಧ್ಯ ಯೂರೊಪ್, ಆಸ್ಟ್ರೇಲಿಯಾ ಮುಂತಾದ ದೇಶಗಳ ಜತೆ ಸಂಪರ್ಕ ಹೊಂದಿದ್ದು ಅಲ್ಲಿ ಓಡಾಡುತ್ತಿದ್ದರು ಎಂದು ಯುಕೆ ಪೊಲೀಸರು ಮಾಹಿತಿ ನೀಡಿದ್ದಾರೆ.