ಸಹಜ ಹೆರಿಗೆಯೊಂದರಲ್ಲಿ, ಕುತ್ತಿಗೆಗೆ ಆರು ಸುತ್ತು ಕರುಳ ಬಳ್ಳಿ ಸುತ್ತಿಕೊಂಡಿದ್ದ ಮಗುವೊಂದರ ಡೆಲಿವರಿ ಸುರಕ್ಷಿತವಾಗಿದ್ದು, ಅದರ ತಾಯಿ ಸಹ ಬದುಕುಳಿದಿದ್ದಾರೆ. ಈ ಮಗುವು ಚೀನಾದ ಹುಬೈ ಪ್ರಾಂತ್ಯದ ಯಿಚಾಂಗ್ ಕೇಂದ್ರ ಆಸ್ಪತ್ರೆಯಲ್ಲಿ ಜನಿಸಿದೆ.
ಕಳೆದ ವಾರ ಜನಿಸಿದ ಈ ಮಗುವನ್ನು ’ಮಿರಾಕಲ್ ಬೇಬಿ’ ಎಂದು ಕರೆಯಲಾಗಿದ್ದು, ಹುಟ್ಟುವಾಗ ಈತನ ತೂಕವು ಮೂರು ಕೆಜಿಗಿಂತ ಸ್ವಲ್ಪ ಹೆಚ್ಚಿತ್ತು.
“ನಾನು 23 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಮಗುವೊಂದು ಹೀಗೆ ಜನಿಸಿದ್ದನ್ನು ನೋಡುತ್ತಿದ್ದೇನೆ” ಎಂದು ವೈದ್ಯರು ವರದಿಗಾರರಿಗೆ ತಿಳಿಸಿದ್ದಾರೆ.
ಮಗುವಿನ ಕರುಳಬಳ್ಳಿಯು 90 ಸೆಂಟಿಮೀಟರ್ ಉದ್ದವಿದ್ದು, ಸರಾಸರಿಗಿಂತ 40 ಸೆಂಮೀ ಉದ್ದವಿತ್ತು ಎಂದು ಹೆರಿಗೆ ತಜ್ಞರು ತಿಳಿಸಿದ್ದಾರೆ. ಗರ್ಭದಲ್ಲಿರುವ ಮಗುವಿಗೆ ರಕ್ತ, ಆಮ್ಲಜನಕ ಹಾಗೂ ಅಗತ್ಯ ಪೋಷಕಾಂಶಗಳ ಪೂರೈಕೆಗೆ ಈ ಕರುಳ ಬಳ್ಳಿ ಬಹಳ ಮುಖ್ಯವಾಗಿದೆ.