ನೈಸರ್ಗಿಕ ವಿಪತ್ತು ಸಂಭವಿಸೋ ಸೂಚನೆ ಸಿಕ್ರೆ ಸಾಕು. ಮನುಷ್ಯ ತಾನು ಉಳಿಯೋಕೆ ಯಾವ ರೀತಿ ಜಾಗೃತೆ ಮಾಡಿಕೊಳ್ಳಬೇಕೋ ಅದನ್ನೆಲ್ಲ ಮಾಡಿಕೊಳ್ತಾನೆ. ಎಷ್ಟೊ ಜನ ತಾವು ಸಾಕಿದ ಸಾಕು ಪ್ರಾಣಿಗಳನ್ನೂ ಬಿಟ್ಟು ಪ್ರಾಣ ರಕ್ಷಣೆಗಂತ ಓಡಿಹೋದ ಸಾಕಷ್ಟು ಉದಾಹರಣೆಗಳನ್ನೂ ನಾವು ಕಂಡಿದ್ದೇವೆ. ಆದರೆ ಇಂತಹ ಎಲ್ಲ ಮಾತುಗಳಿಗೆ ಅಪವಾದ ಎಂಬಂತೆ ನಿಂತಿದ್ದಾರೆ ಮೆಕ್ಸಿಕೋದ ರಿಕಾರ್ಡೋ ಪಿಮೆಂಟಲ್.
ಮೆಕ್ಸಿಕೋದಲ್ಲಿ ಡೆಲ್ಟಾ ಚಂಡಮಾರುತದ ಬಗ್ಗೆ ಸರ್ಕಾರ ಮುನ್ಸೂಚನೆ ನೀಡಿದ್ದೇ ತಡ ಜನರು ಅಪಾಯದ ಸ್ಥಳದಿಂದ ಕಾಲ್ಕಿತ್ತಿದ್ದಾರೆ, ರಿಕಾರ್ಡೋ ಪಿಮೆಂಟಲ್ ಮಾತ್ರ 300 ಶ್ವಾನಗಳನ್ನ ತಮ್ಮ ಮನೆಗೆ ಕರೆದುಕೊಂಡು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಮನೆಗೆ ಪ್ರಾಣಿಗಳ ಭೂಮಿ ಎಂಬರ್ಥ ಬರುವ ಹೆಸರನ್ನ ಇಟ್ಟು 300 ನಾಯಿಗಳನ್ನ ಸಾಕುತ್ತಿದ್ದಾರೆ.
300 ನಾಯಿಗಳನ್ನ ಸಾಕೋದು ರಿಕಾರ್ಡೋಗೆ ಸುಲಭದ ಮಾತಾಗಿರಲಿಲ್ಲ. ಕುಟುಂಬದ ಜವಾಬ್ದಾರಿಯ ಜೊತೆ 300 ನಾಯಿಗಳಿಗೆ ಊಟ ಹಾಕುವ ಜವಾಬ್ದಾರಿ ಕೂಡ ಅವರ ಮೇಲಿತ್ತು. ಆದರೂ ಕೂಡ ಅವೆಲ್ಲವನ್ನ ಹೇಗೋ ನಿಭಾಯಿಸಿಕೊಂಡು ಬಂದಿದ್ದಾರೆ ರಿಕಾರ್ಡೋ. ಅಕ್ಟೋಬರ್ 6ರಂದು ಈ ಮುನ್ನೂರು ನಾಯಿಗಳ ಜೊತೆ ತಾವಿದ್ದ ಫೋಟೋವನ್ನ ರಿಕಾರ್ಡೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದೇ ತಡ ದೇಣಿಗೆಗಳ ಮಹಾಪೂರವೇ ಹರಿದುಬರ್ತಿದೆ.
ಇನ್ನು 300 ನಾಯಿಗಳ ಮಾಲೀಕರಾಗಿ ತಮ್ಮ ಅನುಭವವನ್ನ ಹೇಳಿಕೊಳ್ಳೋ ರಿಕಾರ್ಡೋ, ಈ ಶ್ವಾನಗಳಿಂದ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತೆ. ಪೀಠೋಪಕರಣಗಳು ಹಾಳಾಗಿವೆ. ಆದರೆ ಅವನ್ನೆಲ್ಲ ಸರಿ ಮಾಡಬಹುದು. ಇವುಗಳ ಸಂತೋಷಕ್ಕಿಂತ ಮುಖ್ಯವಾದದ್ದು ನನಗೆ ಬೇರೆ ಏನಿಲ್ಲ ಅಂತಾ ಹೇಳಿದ್ರು.