ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗಳಿಗೆ ಕೋವಿಡ್ – 19 ಇನ್ನಷ್ಟು ಒತ್ತಡವನ್ನು ತಂದಿತು. ಇದರ ಪರಿಣಾಮವಾಗಿ ಉದ್ಯಮಿಗಳು ನೌಕರಿ ಕಡಿತಕ್ಕೆ ಮುಂದಾದರು. ಹಾಗಾಗಿ ಅನೇಕರು ನೌಕರಿ ಕಳೆದುಕೊಂಡರು. ಈಗ ಮೆಕ್ಸಿಕೋದ 79 ವರ್ಷದ ಈ ಅಜ್ಜ ಕೆಲಸ ಕಳೆದುಕೊಂಡಿದ್ದರೂ ಯೂಟ್ಯೂಬ್ ನಲ್ಲಿ ಸೆಲೆಬ್ರಿಟಿಯಾಗಿದ್ದಾರೆ.
ಕಾರ್ಲೋಸ್ ಎಲಿಝೋಂಡೋ ಎಂಬ ವೃದ್ಧರೊಬ್ಬರು ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೋವಿಡ್ 19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ವಯೋವೃದ್ಧರು ಮನೆಯಲ್ಲೇ ಇರಬೇಕೆಂಬ ನಿಯಮ ಹಿನ್ನೆಲೆಯಲ್ಲಿ 7 ವರ್ಷದಿಂದ ಕೆಲಸ ಮಾಡುತ್ತಿದ್ದ ಅವರನ್ನು ನೌಕರಿಯಿಂದ ತೆಗೆದುಹಾಕಲಾಯಿತು. ಆದರೆ, ಮುಂದೇನು ಎಂದು ತೋಚದ ಅವರು ಈಗ ಮನೆಯಲ್ಲೇ ಕುಳಿತು ಸಾಧನೆ ಮಾಡಿ ಜನಪ್ರಿಯರಾಗಿದ್ದಾರೆ.
ಅವರು ತಮ್ಮ ಮಗಳ ಸಹಾಯದಿಂದ ಮಾಂಸ ಮತ್ತು ಚೀಸ್ ನಿಂದ ವಿವಿಧ ಬಗೆಯ ಅಡುಗೆ ಮಾಡುವ ವಿಧಾನವನ್ನು ವಿಡಿಯೋ ಮಾಡಿಸಿಕೊಂಡು ಯೂಟ್ಯೂಬ್ ಗೆ ಅಪ್ಲೋಡ್ ಮಾಡತೊಡಗಿದರು. ಮೇ 25ರಿಂದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿರುವ ಇವರಿಗೆ ಈಗಾಗಲೇ 392k ಸಬ್ ಸ್ಕ್ರೈಬರ್ ಇದ್ದಾರೆ. ಸ್ಪ್ಯಾನಿಷ್ ಭಾಷೆಯಲ್ಲಿರುವ ವಿಡಿಯೋಗೆ ಸಬ್ ಟೈಟಲ್ ಅನ್ನು ಕೊಡಲಾಗುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಅಡುಗೆ ವಿಡಿಯೋಗಳು ವೈರಲ್ ಆಗುತ್ತಿವೆ.