ಶ್ವೇತಭವನದಿಂದ ನಿರ್ಗಮಿಸುವ ಸಮಯ ಸನ್ನಿಹಿತವಾಗುತ್ತಿರುವಂತೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್, ದೇಶದ ಮೊದಲ ಮಹಿಳೆಯಾಗಿ ತಮ್ಮ ಅನುಭವವನ್ನು ಪುಸ್ತಕದ ರೂಪದಲ್ಲಿ ಹೊರ ತರಲು ನೋಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
“ಮೆಲಾನಿಯಾ ಶ್ವೇತಭವನದಲ್ಲಿನ ತಮ್ಮ ಅನುಭಗಳ ಬಗ್ಗೆ ಪುಸ್ತಕವೊಂದನ್ನು ಬರೆಯಲು ಚಿಂತಿಸುತ್ತಿದ್ದಾರೆ. ಈ ಮೂಲಕ ತಮ್ಮದೇ ಹಾದಿಯಲ್ಲಿ ಸಂಪಾದನೆಯನ್ನೂ ಮಾಡಿಕೊಳ್ಳಲು ಅವರಿಗೆ ಇದೊಂದು ಅವಕಾಶ. ಮೆಲಾನಿಯಾ ಪತಿ ಟ್ರಂಪ್ ಖುದ್ದು ಆಕೆಗೆ ಪುಸ್ತಕ ಬರೆಯಲು ಪ್ರೇರಣೆ ಕೊಡುತ್ತಿದ್ದಾರೆ. ಆಕೆ ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಮೆಲಾನಿಯಾರ ಈ ಸ್ಟೋರಿ ಸಖತ್ ದುಡ್ಡು ಮಾಡುವ ಎಲ್ಲಾ ಸಾಧ್ಯತೆಗಳನ್ನೂ ಒಳಗೊಂಡಿದೆ” ಎಂದು ಶ್ವೇತಭವನದ ವ್ಯವಹಾರಗಳನ್ನು ಪ್ರತಿನಿತ್ಯ ಗಮನಿಸುವ ವ್ಯಕ್ತಿಯೊಬ್ಬರು ಪೇಜ್ ಸಿಕ್ಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಮೆರಿಕದ ಮೊದಲ ಮಹಿಳೆಯಾಗಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಆದ ಅನುಭವಗಳ ಬಗ್ಗೆ ಮೆಲಾನಿಯಾ ಅನೇಕ ಸೀಕ್ರೇಟ್‌ಗಳನ್ನು ಈ ಪುಸ್ತಕದ ಮೂಲಕ ಹೊರತರಲಿದ್ದಾರೆ ಎಂಬ ನಿರೀಕ್ಷೆಗಳು ಬಲವಾಗಿವೆ.