
ಸುಮೋ ಕುಸ್ತಿ ಪಟುಗಳ ಪೈಕಿ ಭಾರ ಎತ್ತುವ ವಿಭಾಗದಲ್ಲಿ ಇಲ್ಲೊಬ್ಬ 10 ವರ್ಷದ ಪೋರ ಭಾರೀ ಸದ್ದು ಮಾಡುತ್ತಿದ್ದಾನೆ. ತನ್ನ ವಯಸ್ಸಿನ ಇತರ ಮಕ್ಕಳ ಸರಾಸರಿ ತೂಕದ ದುಪ್ಪಟ್ಟು ಭಾರವಿರುವ ಕ್ಯುಟಾ ಕುಮಾಗಾಯಿ 85 ಕೆಜಿ ತೂಕವಿದ್ದಾನೆ. ಈತ ತನಗಿಂತ ಐದಾರು ವರ್ಷ ದೊಡ್ಡ ಹುಡುಗರೊಂದಿಗೆ ಭಾರೀ ಆತ್ಮವಿಶ್ವಾಸದೊಂದಿಗೆ ಕಣದಲ್ಲಿ ಕುಸ್ತಿಯಾಡುತ್ತಾನೆ. ಕಳೆದ ವರ್ಷದ ಸುಮೋ ಕುಸ್ತಿ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬ್ರಿಟನ್, ಉಕ್ರೇನ್‌ನಂಥ ದೇಶಗಳಿಂದೆಲ್ಲಾ ಬಂದಿದ್ದ ಎದುರಾಳಿಗಳನ್ನು ಮಣಿಸಿದ ಚಾಂಪಿಯನ್ ಆಗಿದ್ದಾನೆ ಈ ಪೋರ.
ತನ್ನ ತಂದೆಯ ಮಾರ್ಗದರ್ಶನದಲ್ಲಿ ವಾರಕ್ಕೆ ಆರು ದಿನ ಟ್ರೇನಿಂಗ್ ಮಾಡುವ ಈತ, ಜೊತೆಯಲ್ಲಿ ಈಜು ಹಾಗೂ ಟ್ರ‍್ಯಾಕ್ ಫೀಲ್ಡ್ ಶಿಸ್ತುಗಳಲ್ಲೂ ಸಹ ಭಾಗಿಯಾಗಿ ದೇಹವನ್ನು ಚುರುಕು ಮಾಡಿಕೊಂಡಿದ್ದಾನೆ. ಕಿಂಡರ್ ಗಾರ್ಟನ್ ಮಟ್ಟದಲ್ಲೇ ಕುಸ್ತಿಯ ಕಣಕ್ಕೆ ಇಳಿದ ಕ್ಯುಟಾ ಪಥ್ಯದ ವೇಳಾಪಟ್ಟಿಯನ್ನೂ ಚೆನ್ನಾಗಿ ಮೇಂಟೇನ್ ಮಾಡುತ್ತಾ ಬಂದಿದ್ದಾನೆ.
ಪ್ರತಿನಿತ್ಯ 2700-4000 ಕ್ಯಾಲೋರಿಯಷ್ಟು ಆಹಾರ ಸೇವನೆ ಮಾಡುವ ಕ್ಯುಟಾ, ಮುಖ್ಯವಾಗಿ ಹಾಲು ಹಾಗೂ ದೊಡ್ಡ ಪ್ರಮಾಣದಲ್ಲಿ ಪ್ರೋಟೀನ್‌ಗಳನ್ನು ತೆಗೆದುಕೊಳ್ಳುತ್ತಾನೆ. ಮಿಡಲ್ ಸ್ಕೂಲ್‌ಗೆ ಬರುವಷ್ಟರಲ್ಲಿ ಈತನ ದೇಹಕ್ಕೆ ಇನ್ನೂ 20 ಕೆಜಿಯಷ್ಟು ತೂಕ ಸೇರಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾನೆ ಬಾಲಕ.