ಯೂಟ್ಯೂಬ್‌ನಲ್ಲಿ ವೈರಲ್ ಆಗುವುದು ಹೇಗೆ ಎಂಬ ಯಕ್ಷ ಪ್ರಶ್ನೆಗೆ ಅಮೆರಿಕ ಜಿಮ್ಮಿ ಡೊನಾಲ್ಡ್‌ಸನ್ ಹೆಸರಿನ 22ರ ಯುವಕನೊಬ್ಬ ಉತ್ತರ ಕಂಡು ಹಿಡಿದಿದ್ದಾನೆ.
2016ರಲ್ಲಿ, ತನ್ನ 18ನೇ ವಯಸ್ಸಿನಲ್ಲಿ ಕಾಲೇಜು ಶಿಕ್ಷಣಕ್ಕೆ ಗುಡ್‌ಬೈ ಹೇಳಿದ ಜಿಮ್ಮಿ ಈ ಕೆಲಸಕ್ಕೆ ಕೈ ಹಾಕಿದ್ದಾನೆ. 12ನೇ ವಯಸ್ಸಿನಿಂದಲೇ ಯೂಟ್ಯೂಬ್‌ನಲ್ಲಿ ಕಂಟೆಂಟ್ ಹಾಕಲು ಶುರು ಮಾಡಿದ ಜಿಮ್ಮಿಗೆ ಹೇಳಿಕೊಳ್ಳುವಷ್ಟು ವೀವ್ಸ್ ಸಿಗದೇ ಹೋದಾಗ, ಯೂಟ್ಯೂಬ್‌ನ ಆಲ್ಗರಿದಮ್ ಅನ್‌ಲಾಕ್ ಮಾಡುವುದು ಹೇಗೆ ಎಂಬ ಕುತೂಹಲ ಬೆಳೆದಿದೆ.
ತನ್ನ ಗೆಳೆಯರೊಂದಿಗೆ ಸೇರಿಕೊಂಡ ಜಿಮ್ಮಿ, ಯೂಟ್ಯೂಬ್‌ನಲ್ಲಿ ಅತ್ಯಂತ ಹೆಚ್ಚು ಓಡುವ ವಿಡಿಯೋಗಳಿಗೆ ಹೇಗೆಲ್ಲಾ ಅಷ್ಟು ವೀಕ್ಷಕರು ಹುಟ್ಟಿಕೊಂಡರು ಎಂಬ ಬಗ್ಗೆ ಹಗಲು/ರಾತ್ರಿ ಅಧ್ಯಯನ ನಡೆಸಿದ್ದಾನೆ.
ಹೀಗೆ ನಡೆಯುತ್ತಿದ್ದಾಗ, ಒಮ್ಮೆ ನಿರಂತರ 40 ಗಂಟೆಗಳ ಅವಧಿಗೆ ಸಂಖ್ಯೆ ಎಣಿಸಲು ಮುಂದಾದ ಜಿಮ್ಮಿ, ಒಂದರಿಂದ ಲಕ್ಷದವರೆಗೂ ಸಂಖ್ಯೆಗಳನ್ನು ಹೇಳಿಕೊಂಡು ಹೋಗಿದ್ದಾನೆ. ಆ ವಿಡಿಯೋ ಸಖತ್ ಹಿಟ್ ಸಹ ಆಗಿಬಿಟ್ಟಿದೆ ಜನವರಿ 8, 2017ರಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋಗೆ ಇದುವರೆಗೂ 2.1 ಕೋಟಿ ವೀವ್ಸ್ ಸಿಕ್ಕಿದೆ.
ಮಿಸ್ಟರ್‌ಬೀಸ್ಟ್ ಹೆಸರಿನ ಜಿಮ್ಮಿಯ ಚಾನೆಲ್‌ಗೆ 4.8 ಕೋಟಿಗೂ ಅಧಿಕ ಚಂದಾದಾರರಿದ್ದಾರೆ. ಕಳೆದ 28 ದಿನಗಳ ಅವಧಿಯಲ್ಲಿ 3.4 ಕೋಟಿ ಮಾನವ ಗಂಟೆಗಳಷ್ಟರ ಮಟ್ಟಿಗೆ ಆತನ ವಿಡಿಯೋಗಳು ಬಿತ್ತರಗೊಂಡಿವೆ. ಆತ ಪೋಸ್ಟ್ ಮಾಡುವ ಪ್ರತಿಯೊಂದು ವಿಡಿಯೋಗೂ ಸತತವಾಗಿ 2 ಕೋಟಿಗೂ ಅಧಿಕ ವೀವ್ಸ್ ಸಿಗುತ್ತಿರುವ ಕಾರಣದಿಂದ ಆತನಿಗೆ ಯೂಟ್ಯೂಬ್‌ನ ಅತ್ಯಂತ ಪ್ರತಿಷ್ಠಿತ ’ಸ್ಟ್ರೀಮೀ ಅವಾರ್ಡ್’ ಒಲಿದು ಬಂದಿದೆ.