ಆರು ವಾರಗಳಿಂದ ಮೋಸ್ಟ್ ವಾಂಟೆಡ್ ಆಗಿರುವ ಯೂರೋಪ್‌ನ ಈ ಸೆಲೆಬ್ರಿಟಿ ಕರಡಿಯೊಂದನ್ನು ರೇಂಜರ್‌ಗಳು ಕೊನೆಗೂ ಹಿಡಿತಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ.
149 ಕೆಜಿ ಇರುವ ಈ ಕಂದು ಬಣ್ಣದ ಕರಡಿಗೆ ’ಪಾಪಿಲಾನ್’ ಎಂಬ ಅಡ್ಡ ಹೆಸರಿದೆ. ಮೃಗಾಲಯದಲ್ಲಿರುವ ತನ್ನ ಕ್ಯಾಬಿನ್‌ನಿಂದ ತಪ್ಪಿಸಿಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ ಈ ಜಂಬೂರಾಯ.
ಇಟಲಿಯ ಕಸ್ಟೆಲ್ಲರ್ ಕೇಂದ್ರ ಮೃಗಾಲಯದಿಂದ ನಾಪತ್ತೆಯಾಗಿದ್ದ ಪಾಪಿಲಾನ್, ಟ್ರೆಂಟೋ ಪ್ರಾಂತ್ಯದಲ್ಲಿ ರೇಂಜರ್‌ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಪದೇ ಪದೇ ಎಸ್ಕೇಪ್ ಆಗುವ ಪಾಪಿಲಾನ್ ಅದೆಷ್ಟು ಸುದ್ದಿ ಮಾಡಿದ್ದನೆಂದರೆ, ಟ್ರೆಂಟೋ ಪ್ರಾಂತ್ಯದ ಅಧ್ಯಕ್ಷ ಮೌರಿಝೋ ಫುಗಟ್ಟಿ ಕರಡಿಯನ್ನು ಸೆರೆ ಹಿಡಿಯಲು ಖುದ್ದು ಆದೇಶ ನೀಡುವಂತೆ ಆಗಿತ್ತು. ಜುಲೈ 15ರಂದು ತಪ್ಪಿಸಿಕೊಂಡಿದ್ದ ಈ ಜಂಬೂರಾಯ, ಮೂರು ವಿದ್ಯುತ್ ಕಂಬಗಳನ್ನು ಹತ್ತಿ ಇಳಿದು, ನಾಲ್ಕು ಮಿಟರ್ ಎತ್ತರದ ಗೋಡೆಯನ್ನೂ ಸಹ ದಾಟಿಕೊಂಡು ವಿಹಾರಕ್ಕೆ ಹೊರಟಿದ್ದ.