ಗೇಮ್ಸ್ ಆಡಲು, ಹಾಡು ಕೇಳಲು ಮಕ್ಕಳು ತಮ್ಮ ಹೆತ್ತವರ ಫೋನ್‌ಗಳನ್ನು ಹಿಡಿದುಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ತಪ್ಪಾದ ಬಟನ್/ಆಯ್ಕೆ ಒತ್ತುವ ಮೂಲಕ ಮಕ್ಕಳು ಬಹಳ ಅವಾಂತರ ಮಾಡಿಬಿಡುತ್ತವೆ.
ಬ್ರೆಜಿಲ್‌ನ ಮೂರು ವರ್ಷದ ಮಗುವೊಂದು ತನ್ನ ಅಮ್ಮನ ಸ್ಮಾರ್ಟ್ ಫೋನ್ ಎತ್ತಿಕೊಂಡು ಮ್ಯಾಕ್ ಡೊನಾಲ್ಡ್ಸ್‌ನಲ್ಲಿ ಫುಡ್ ಆರ್ಡರ್ ಮಾಡಿಬಿಟ್ಟಿದ್ದಾನೆ. ಭಾರೀ ಉತ್ಸಾಹದಲ್ಲಿ ಈ ಪೋರ ಒಮ್ಮೆಲೇ $74 ನಷ್ಟು (5,400 ರೂ.ಗಳಷ್ಟು) ಫುಡ್ ಆರ್ಡರ್ ಮಾಡಿಬಿಟ್ಟಿದ್ದಾನೆ.
ಒಟ್ಟಾರೆ 10 ಬ್ಯಾಗ್‌ಗಳಲ್ಲಿ ಆಹಾರವನ್ನು ರೆಸ್ಟೋರಂಟ್ ಪ್ಯಾಕ್ ಮಾಡಿ ಬಾಲಕನ ಮನೆಗೆ ಕಳುಹಿಸಿಕೊಟ್ಟಿದೆ. ಇದರಲ್ಲಿ ಆರು ಮೀಲ್‌ಗಳೂ, ಆರು ಹ್ಯಾಪಿ ಮೀಲ್‌ಗಳು, ಎಂಟು ವಿಶೇಷ ಆಫರ್ ಆಟಿಕೆಗಳು, 10 ಮಿಲ್ಕ್‌ಶೇಕ್‌ಗಳು, ಎಂಟು ಬಾಟಲಿ ನೀರು ಹಾಗೂ ಎರಡು ಮ್ಯಾಕ್ ಸಂಡೇಗಳು ಬಾಲಕನ ಮನೆ ಬಾಗಿಲಿಗೆ ಬಂದಿವೆ.
ಕೊರೋನಾ ವೈರಸ್ ಸಾಂಕ್ರಮಿಕದ ವೇಳೆ ತನ್ನ ಮನೆಯಲ್ಲಿ ದೊಡ್ಡವರು ಫುಡ್ ಆರ್ಡರ್ ಮಾಡಿಸಿಕೊಂಡು ತರಿಸಿಕೊಳ್ಳುತ್ತಿರುವುದನ್ನ ಕಂಡ ಈ ಮಗು ತಾನೂ ಸಹ ಆನ್ಲೈನ್‌ನಲ್ಲಿ ಆರ್ಡರ್ ಮಾಡುವುದನ್ನು ಕಲಿತುಕೊಂಡುಬಿಟ್ಟಿದೆ.
ಈ ಭಾರೀ ಆರ್ಡರ್ ಅನ್ನು ವೇಸ್ಟ್ ಮಾಡಲು ಬಿಡದ ಈ ಪೋರನ ತಾಯಿ, ತಾನಿರುವ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ದೊಡ್ಡ ಕುಟುಂಬದ ಎಲ್ಲ ಸದಸ್ಯರೊಂದಿಗೂ ಹಂಚಿಕೊಂಡಿದ್ದಾರೆ.