ಫಾಸ್ಟ್ ಫುಡ್ ತಿನ್ನಬೇಕೆಂಬ ಆಸೆ ಎಂಥವರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ನಮ್ಮಿಚ್ಛೆಯ ಜಂಕ್ ಫುಡ್ ತಿನ್ನಲು ಬಹಳ ದೂರ ಹೋಗಲೂ ನಾವು ಯೋಚಿಸುವುದಿಲ್ಲ.
ಕೋವಿಡ್ ಲಾಕ್‌ಡೌನ್ ನಡುವೆಯೇ ಮ್ಯಾಕ್‌ಡೊನಾಲ್ಡ್ ರೆಸ್ಟಾರಂಟ್ ಒಂದಕ್ಕೆ ಭೇಟಿ ಕೊಡುವ ಆಸೆ ತಾಳಲಾರದ ವ್ಯಕ್ತಿಯೊಬ್ಬರು, ಇದಕ್ಕೆಂದು ತಮ್ಮ ಮನೆಯಿಂದ 160 ಕಿಮೀ ದೂರ ಕ್ರಮಿಸಿ, ಅದಕ್ಕೆ ದಂಡ ತೆತ್ತ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ತನ್ನ ಊರು ಲುಟೋನ್‌ನಲ್ಲಿ ಮ್ಯಾಕ್‌ಡೊನಾಲ್ಡ್ ಇಲ್ಲದೇ ಇರುವ ಕಾರಣ ದೂರದ ಡೆವಿಜೆಸ್‌ಗೆ ಕಾರು ಚಾಲನೆ ಮಾಡಿಕೊಂಡ 34 ವರ್ಷದ ಈ ವ್ಯಕ್ತಿ, ಕೌಂಟಿಗಳನ್ನೇ ದಾಟಿ ಹೋಗಿದ್ದಾರೆ. ಲಾಕ್‌ಡೌನ್ ನಿಯಮಾವಳಿಯನ್ನು ಹೀಗೆ ಬ್ರೇಕ್ ಮಾಡಿದ ಕಾರಣ ಈ ವ್ಯಕ್ತಿಗೆ ಪೊಲೀಸರು 200 ಪೌಂಡ್ ದಂಡ ಹಾಕಿದ್ದಲ್ಲದೇ, ವಿಮೆ ಮಾಡಿಸಿರದ ಕಾರಣ ಆತನ ಕಾರನ್ನೂ ಜಪ್ತಿ ಮಾಡಿಕೊಂಡಿದ್ದಾರೆ.