ನಿಮಗೆ ಸದಾ ಕೇಕ್ ಅಥವಾ ಅತಿಯಾದ ಸಿಹಿ ತಿನಿಸು ತಿನ್ನುವ ಅಭ್ಯಾಸ ಇದೆಯೇ ? ಅತಿಯಾಗಿ ಉಪವಾಸ ಮಾಡುವ ಅಭ್ಯಾಸ ಇದೆಯೇ ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ಓದಿಬಿಡಿ.
ಈತ ಒಂದೇ ಒಂದು ಹನಿ ಮದ್ಯ ಸೇವಿಸದಿದ್ದರೂ ಹೊಟ್ಟೆಯೊಳಗೆ ಆಗಾಗ್ಗೆ ಲೀಟರ್ ಗಟ್ಟಲೇ ಮದ್ಯ ಸೇರಿಕೊಳ್ಳುತ್ತದೆ. ಅಷ್ಟೇ ಅಲ್ಲ, ಆತ ಕುಡಿದವರಂತೆ ನಶೆಯಲ್ಲಿ ತೂರಾಡಲೂ ಶುರು ಮಾಡುತ್ತಾನೆ.
ಇದೇನಿದು ವಿಚಿತ್ರ ಎನಿಸುತ್ತಿದೆಯೇ ? ಹೌದು, ಇದು ಆಟೋ ಬ್ರೇವರಿ ಸಿಂಡ್ರೋಮ್ ಎಂಬ ರೋಗ ಲಕ್ಷಣ. ಓದಲು ಹಾಸ್ಯಾಸ್ಪದ ಎನಿಸಿದರೂ ಜೀವಕ್ಕೇ ಕುತ್ತು ತರುವ ಅಪರೂಪದ ಕಾಯಿಲೆ.
ಇಂಗ್ಲೆಂಡಿನ ನಿಕ್ ಕಾರ್ಸನ್ (62) ಎಂಬಾತನಲ್ಲಿ ಈ ರೋಗಲಕ್ಷಣ ಕಾಣಿಸಿಕೊಂಡಿದ್ದು, 20 ವರ್ಷದಿಂದ ಸಮಸ್ಯೆ ಎದುರಿಸುತ್ತಿದ್ದರೂ ವೈದ್ಯಕೀಯವಾಗಿ ದೃಢೀಕೃತ ಆದದ್ದು ಮಾತ್ರ ಇತ್ತೀಚೆಗೆ.
ಸದಾ ಕೇಕ್ ತಿನ್ನುವ ಈತನ ಸಣ್ಣ ಕರುಳಿನಲ್ಲಿ ಮದ್ಯಸಾರದ ಅಂಶ ಪತ್ತೆಯಾಗಿದೆ. ಕಾರ್ಬೋಹೈಡ್ರೇಟ್ ಅಂಶವು ಹೊಟ್ಟೆಯಲ್ಲಿ ಸೇರಿಕೊಂಡು ಹುದುಗುವುದರಿಂದ ಎಥೆನಾಲ್ ಅಥವಾ ಆಲ್ಕೋಹಾಲ್ ಅಂಶವಾಗಿ ಪರಿವರ್ತಿತವಾಗುತ್ತದೆ.
ಗಂಟೆಗೊಮ್ಮೆ ಆಲ್ಕೋಹಾಲ್ ಉತ್ಪತ್ತಿಯಾಗುವುದರಿಂದ ತೂರಾಡುವಂತಾಗುತ್ತದೆ. ದೇಹ, ಮೆದುಳಿನ ಮೇಲೆ ನಿಯಂತ್ರಣವೇ ಇಲ್ಲದಂತಾಗುತ್ತದೆ. ಒಟ್ಟಿನಲ್ಲಿ ಸದಾ ಮತ್ತಿನಲ್ಲಿ ತೇಲಿದಂತಾಗುತ್ತದೆ.
ಆಲ್ಕೋಹಾಲ್ ಪ್ರಮಾಣ ಅಳೆಯಲು ಪೊಲೀಸರ ಬಳಿ ಇರುವ ಸಾಧನ ಇಟ್ಟುಕೊಂಡು ಗಂಟೆಗೊಮ್ಮೆ ಪರೀಕ್ಷೆ ಮಾಡಿಕೊಳ್ಳುವ ನಿಕ್, ಮದ್ಯಸಾರ ಉತ್ಪತ್ತಿಯ ನಿಯಂತ್ರಣಕ್ಕಾಗಿ ಕೆಲ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೂ ಇದರಿಂದ ಹೊರಬರಲಾಗಿಲ್ಲ.