ಸ್ಕಾಟ್ಲೆಂಡ್: ತಂದೆ ತನ್ನ ಹುಟ್ಟು ಹಬ್ಬಕ್ಕೆ ಕೊಟ್ಟ ವಿಸ್ಕಿ ಬಾಟಲ್ ಗಳನ್ನು ಮಾರಿ ಮನೆ ಖರೀದಿಸುವ ಯೋಚನೆಯಲ್ಲಿ ಇಲ್ಲೊಬ್ಬ ಮಗನಿದ್ದಾನೆ. ವಿಸ್ಕಿ ಬಾಟಲಿಯಿಂದ ಮನೆ ಖರೀದಿ ಹೇಗೆ ಸಾಧ್ಯ ಎಂದು ನೀವು ನಕ್ಕುಬಿಡಬಹುದು. ಆದರೆ, ವಾಸ್ತವ ಹಾಗಿಲ್ಲ. ಆತನ ನಿಜ ಕಥೆ ತಿಳಿಯಲು ಈ ಸ್ಟೋರಿ ಓದಿ.
1992 ರಲ್ಲಿ ಸೋಮರ್ ಸೆಟ್ ನಲ್ಲಿ ಹುಟ್ಟಿದ ಮ್ಯಾಥ್ಯೂ ರಾಬಿನ್ಸನ್ ಗೆ ಅವರ ತಂದೆ ಪೆಟೆ ಅವರು ಪ್ರತಿ ವರ್ಷ ಹುಟ್ಟಿದ ಹಬ್ಬಕ್ಕೆ ಮೆಕೆಲನ್ ಕಂಪನಿಯ ಫ್ಯಾನ್ಸಿ ವಿಸ್ಕಿ ಬಾಟಲಿಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.
ಮ್ಯಾಥ್ಯೂ ಚಿಕ್ಕವನಿದ್ದಾಗ ಆ ಬಾಟಲಿಗಳನ್ನು ತೆರೆಯದಂತೆ ಪೆಟೆ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಅದರಂತೆ ಮಗ ಬಾಟಲಿಗಳನ್ನು ಬಾಕ್ಸ್ ಒಡೆಯದೇ ಸಂಗ್ರಹಿಸಿದ್ದಾನೆ.
ಕಳೆದ 28 ವರ್ಷಗಳಲ್ಲಿ ಅವರು ಸುಮಾರು 5 ಸಾವಿರ ಸ್ಕಾಟಿಷ್ ಡಾಲರ್ (4.77 ಲಕ್ಷ ರೂ.) ಗಳನ್ನು ಆ ವಿಸ್ಕಿಗಾಗಿ ಖರ್ಚು ಮಾಡಿದ್ದಾರೆ. ಅದರ ಮೌಲ್ಯ ಈಗ 40 ಸಾವಿರ ಡಾಲರ್ (38.17 ಲಕ್ಷ ರೂ.) ಆಗಿದೆ. ಅದರ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
“ನನ್ನ ತಂದೆ ನೀಡಿದ ವಿಸ್ಕಿ ಬಾಟಲ್ ಗಳು ನನಗೆ ಇಷ್ಟು ಅಮೂಲ್ಯವಾದ ಉಡುಗೊರೆಯಾಗುತ್ತವೆ ಎಂದು ನಾನಂದುಕೊಂಡಿರಲಿಲ್ಲ” ಎಂದು ಮ್ಯಾಥ್ಯೂ ಹೇಳಿಕೊಂಡಿದ್ದಾರೆ. ಪೆಟೆ ಅವರು ಸ್ಕಾಟ್ ಲ್ಯಾಂಡ್ ನ ಮಿಲ್ನಾಶಾರ್ಟ್ ಎಂಬಲ್ಲಿ ವಿಸ್ಕಿ ಕಂಪನಿಯ ಮೂಲ ವಸ್ತು ತಯಾರಿಸುವ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.