ಬಿಳಿ ತೊನ್ನು ಅಥವಾ ಬಿಳಿ ಮಚ್ಚೆ ಎಂಬ ಚರ್ಮದ ಕಾಯಿಲೆ ಚರ್ಮದ ಬಣ್ಣವನ್ನೆಲ್ಲ ಬೆಳ್ಳಗೆ ಮಾಡಿಬಿಡುತ್ತೆ. ಇದೇ ಸಮಸ್ಯೆಯಿಂದ ಬಳಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 10 ವರ್ಷಗಳ ಕಾಲ ತೊನ್ನುಗಳನ್ನ ಮೇಕಪ್ ಮೂಲಕ ಮುಚ್ಚಿದ್ದಾನೆ. ಬ್ರೆಜಿಲ್ನ ರೋಗರ್ ಮಾಂಟೆ ಎಂಬ ಹೆಸರಿನ ವ್ಯಕ್ತಿ 23 ವರ್ಷದವನಿದ್ದಾಗ ತನ್ನ ದೇಹದಲ್ಲಿ ಮೊದಲ ಬಿಳಿ ಮಚ್ಚೆಯನ್ನ ಗುರುತಿಸಿದ್ದ. ಇದರಿಂದ ಆತ ತೀವ್ರ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ದೇಹದಲ್ಲಿ ವರ್ಣದ್ರವ್ಯ ಅಂಶದ ಕೊರತೆಯಿಂದ ದೇಹದ ಮೇಲೆ ಬಿಳಿ ಕಲೆಗಳು ಉಂಟಾಗುವ ಸಮಸ್ಯೆಯನ್ನೇ ಬಿಳಿ ತೊನ್ನು ಎಂದು ಕರೀತಾರೆ. ಕ್ರಮೇಣವಾಗಿ ವ್ಯಕ್ತಿಯ ದೇಹ ಸಂಪೂರ್ಣ ಬಿಳಿಯ ಬಣ್ಣಕ್ಕೆ ತಿರುಗುತ್ತದೆ.
ನಾನು 23 ವರ್ಷದವನಿದ್ದಾಗ ದೇಹದಲ್ಲಾದ ಈ ಮಾರ್ಪಾಡನ್ನ ಕಂಡು ಘಾಸಿಗೊಳಗಾಗಿದ್ದೆ. ನನ್ನ ಚರ್ಮವು ಬಣ್ಣವನ್ನ ಕಳೆದುಕೊಳ್ತಿತ್ತು. ನನ್ನ ಜೀವನ ಆರಂಭವಾಗೋಕೂ ಮುನ್ನ ಅಂತ್ಯವಾಯ್ತು ಅಂತಾನೇ ಭಾವಿಸಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನ ಹೇಗೆ ಉಪಚರಿಸಬಹುದು ಎಂಬುದನ್ನ ನೆನೆಸಿಕೊಂಡೇ ನನಗೆ ಭಯವಾಗ್ತಾ ಇತ್ತು. ನಾನು ಕನ್ನಡಿಯಲ್ಲಿ ನನ್ನನ್ನ ನಾನು ನೋಡಿಕೊಳ್ಳೋದನ್ನೇ ಬಿಟ್ಟಿದ್ದೆ ಎಂದು ಮಾಂಟೆ ತನ್ನ ಹಿಂದಿನ ಕತೆಯನ್ನ ಹೇಳಿದ್ದಾರೆ.
ಸಾರ್ವಜನಿಕವಾಗಿ ಸಾಕಷ್ಟು ಮುಜುಗರಕ್ಕೆ ಒಳಗಾದ ಬಳಿಕ ಮಾಂಟೆ ಮೇಕಪ್ ಮೂಲಕ ತನ್ನ ಕಲೆಯನ್ನ ಮರೆಮಾಚೋಕೆ ಶುರು ಮಾಡಿದ್ರು. ಬೆವರು ಬಂದು ಎಲ್ಲಿ ಮೇಕಪ್ ಅಳಿಸಿ ಹೋಗುತ್ತದೆಯೆನೋ ಎಂದು ಮಾಂಟೆ ಜಿಮ್, ಸಮುದ್ರದ ಕಡೆ ಹೋಗುತ್ತಲೇ ಇರಲಿಲ್ಲವಂತೆ.
ಆದರೆ 2016ರಲ್ಲಿ ಮಾಂಟೆ ಜೀವನ ಬದಲಾಯ್ತು. ಈತನ ಹೊಸ ಸ್ನೇಹಿತರ ಬಳಗ ಈ ಕಲೆಯನ್ನ ನೋಡಿ ಖುಷಿ ಪಟ್ಟಿತು. ಹಾಗೂ ಮಾಂಟೆಗೆ ಆತ್ಮವಿಶ್ವಾಸವನ್ನ ತುಂಬಿತು. ಹೀಗಾಗಿ ಮಾಂಟೆ ಒಂದು ದಿನ ತಮ್ಮ ಫೋಟೋವನ್ನ ತಾವೇ ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ರು. ಈ ಫೋಟೋ ಸಾಕಷ್ಟು ಲೈಕ್ಗಳನ್ನ ಪಡೆದುಕೊಳ್ತು.
ಅಲ್ಲದೇ ಈಗಾಗಲೇ ಈ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ಅನೇಕರಿಗೆ ಮಾಂಟೆ ಫೋಟೋಗಳು ಸ್ಪೂರ್ತಿ ನೀಡಿದ್ವು. ಮಾಂಟೆ ಫೋಟೋಗಳನ್ನ ಶೇರ್ ಮಾಡುತ್ತಲೇ ಹೋದ್ರು. ಅಲ್ಲದೇ ಮೇಕಪ್ನಿಂದ ತನ್ನ ಕಲೆಗಳನ್ನ ಮರೆಮಾಚಿಕೊಳ್ಳುವ ಅಭ್ಯಾಸವನ್ನ ಬಿಟ್ಟ ಮಾಂಟೆ ಇದೀಗ ಮಾಡೆಲ್ ಆಗಿದ್ದಾರೆ.