ಜೀವಂತ ಸಮಾಧಿಯಾಗಲು ಭಯ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಸಮಾಧಿಗೆ ಗಂಟೆ ಹಾಗೂ ಕಿಟಕಿಯನ್ನ ಅಳವಡಿಸಿಕೊಂಡಿದ್ದ ಎಂಬ ಇತಿಹಾಸದ ಕತೆಯೊಂದು ಟಿಕ್ಟಾಕ್ನಲ್ಲಿ ಸಖತ್ ವೈರಲ್ ಆಗ್ತಿದೆ.
ಡಾ. ಟಿಮೋಥಿ ಕ್ಲರ್ಕ್ ಸ್ಮಿತ್ ಎಂಬಾತ ಜೀವಂತ ಸಮಾಧಿ ಬಗ್ಗೆ ತುಂಬಾನೇ ಭಯ ಇಟ್ಟುಕೊಂಡಿದ್ದ ಕಾರಣ ತನ್ನ ಸಮಾಧಿಗೆ ಕಿಟಕಿ ಹಾಗೂ ಗಂಟೆಯನ್ನ ಅಳವಡಿಸಿದ್ದನಂತೆ. ಒಂದು ವೇಳೆ ಆತನಿಗೆ ಎಚ್ಚರವಾದರೆ ಗಂಟೆಯನ್ನ ಬಡಿದು ಜನರಿಗೆ ಹೇಳಬಹುದು ಅನ್ನೋದು ಈತನ ಯೋಚನೆಯಾಗಿತ್ತಂತೆ.
ಅಮೆರಿಕದ ವರ್ಮೋಂಟ್ನ ನ್ಯೂ ಹೆವನ್ನಲ್ಲಿ ಡಾ. ಸ್ಮಿತ್ನ ಸಮಾಧಿ ಇದೆ. ಈ ಕಿಟಕಿ ಸಮಾಧಿ ಇದೀಗ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಬದಲಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಕಿಟಕಿಯಿಂದ ಇಣುಕಿ ಸತ್ತ ವೈದ್ಯನನ್ನ ನೋಡೋಕೆ ಪ್ರಯತ್ನ ಪಡ್ತಾರೆ.
ಟಿಕ್ಟಾಕ್ ಬಳಕೆದಾರ @bobbiecurtislee ಎಂಬಾಕೆ ಈ ಸಮಾಧಿಯ ಫೋಟೋಗಳನ್ನ ಪೋಸ್ಟ್ ಮಾಡಿ ಇದರ ಇತಿಹಾಸದ ಬಗ್ಗೆ ತಿಳಿಸಿದ್ದಾರೆ. ಸ್ಮಿತ್ ಎಂಬ ಹೆಸರಿನ ವೈದ್ಯ ತನ್ನ ಸಮಾಧಿಯನ್ನ ತಾನೇ ವಿನ್ಯಾಸಗೊಳಿಸಿಕೊಂಡಿದ್ದ. ಈತ ತನ್ನ ಸಮಾಧಿಗೆ ಕಿಟಕಿಯನ್ನ ಅಳವಡಿಸೋದ್ರ ಜೊತೆಗೆ ಗಂಟೆಯನ್ನೂ ಹಾಕಿದ್ದ. ಒಂದು ವೇಳೆ ಈತನಿಗೆ ಎಚ್ಚರವಾಗಿಬಿಟ್ಟರೆ ಗಂಟೆಯನ್ನ ಬಾರಿಸಿ ಸಹಾಯಕ್ಕಾಗಿ ಮೊರೆ ಹೋಗಬಹುದು ಅನ್ನೋದು ಈತನ ಪ್ಲಾನ್ ಆಗಿತ್ತು ಎಂದು ಆಕೆ ವಿವರಿಸಿದ್ದಾಳೆ.
1893ರಲ್ಲಿ ಈ ವೈದ್ಯ ನಿಧನರಾಗಿದ್ದು ಈತ ಎಂದಿಗೂ ಆ ಗಂಟೆಯ ಸಹಾಯವನ್ನ ಪಡೆಯುವ ಅವಶ್ಯಕತೆ ಬರಲೇ ಇಲ್ಲ. ಈ ಸಮಾಧಿಯ ಮೇಲಿನ ಕಿಟಕಿ ಈಗಲೂ ಕೂಡ ಇದೆ. ಆದರೆ ಆ ಕಿಟಕಿಯಿಂದ ಮೃತ ವೈದ್ಯನ ಶವ ಸರಿಯಾಗಿ ಗೋಚರವಾಗೋದಿಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://youtu.be/yyEIBNbyN8w