ಮೆಲ್ಬೋರ್ನ್: ಫೋಕಮಾನ್ ಗೋ ಮೊಬೈಲ್ ಗೇಮ್ 2016-17 ರಲ್ಲಿ ಭಾರಿ ಸದ್ದು ಮಾಡಿತ್ತು.
ಈ ಆಟದಲ್ಲಿ ಫೋಕಮಾನ್ ಎಂಬ ಮೊಬೈಲ್ ನಲ್ಲಿ ಬರುವ ಕಿಲಾಡಿ ಗೊಂಬೆಯನ್ನು ಹಿಡಿಯಲು ಆಟಗಾರರು ಇಡೀ ನಗರವನ್ನೆಲ್ಲ ಸುತ್ತುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ಆ ಆಟದ ಕ್ರೇಜ್ ಕಡಿಮೆಯಾಗಿದೆ.
ಆದರೂ ಅಲ್ಲಲ್ಲಿ ಕೆಲವು ಫೋಕಮಾನ್ ಗೋ ಆಟಗಾರರಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಈ ಆಟ ಆಡುತ್ತ ಕೊರೊನಾ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ದುಬಾರಿ ದಂಡ ತೆತ್ತಿದ್ದಾನೆ.
ಮೆಲ್ಬೋರ್ನ್ ನಲ್ಲಿ ಲಾಕ್‌ಡೌನ್ -4 ನಡೆಯುತ್ತಿದ್ದು, ವ್ಯಕ್ತಿಗಳು ತಮ್ಮ ಮನೆಯಿಂದ 5 ಕಿಮೀ ಹೊರಗೆ ಹೋಗುವಂತಿಲ್ಲ. ಆದರೆ, ವ್ಯಕ್ತಿ ಫೋಕಮಾನ್ ಗೋ ಆಡುತ್ತ ತನ್ನ ಮನೆಯಿಂದ 14 ಕಿಮೀ ದೂರ ಸಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಆತನಿಗೆ ಪೊಲೀಸರು 1,652 ಡಾಲರ್ ದಂಡ ವಿಧಿಸಿದ್ದಾರೆ. ಆತ ಮಾತ್ರವಲ್ಲ ವಿಕ್ಟೋರಿಯಾದ ಇಬ್ಬರು ಇದೇ ರೀತಿ ನಿಯಮ ಮುರಿದು ದಂಡ ತೆತ್ತಿದ್ದರು. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಬಟರ್ ಚಿಕನ್ ಹುಡುಕುತ್ತ ತನ್ನ ಮನೆಯಿಂದ 32 ಕಿಮೀ ದೂರ ಹೋಗಿ ದಂಡ ಕಟ್ಟಿದ್ದನ್ನು ಇಲ್ಲಿ ನೆನಪಿಸಬಹುದು.