ಯಾರ್ಕ್‌ಷೈರ್: ಬ್ರೇನ್ ಟ್ಯೂಮರ್ ತೆಗೆಯಲು ನಡೆಸಿದ್ದ ಐದು ತಾಸಿನ ಶಸ್ತ್ರಚಿಕಿತ್ಸೆ ವೇಳೆ ರೋಗಿ ವೈದ್ಯರ ಜತೆ ಸೆಲ್ಫಿ ತೆಗೆದುಕೊಂಡು ವಾಟ್ಸ್ ಆಪ್‌ನಲ್ಲಿ ಕುಟುಂಬದವರು, ಸ್ನೇಹಿತರಿಗೆ ಕಳಿಸುತ್ತಿದ್ದ…!!
ಕೊರೊನಾ ವೈರಸ್ ಲಾಕ್‌ಡೌನ್ ವೇಳೆ ಹುಲ್ ರಾಯಲ್ ಇನ್ಫಾರ್ಮರಿಯಲ್ಲಿ ನಡೆದ ಶಸ್ತ್ರಚಿಕಿತ್ಸೆ ವೇಳೆ ಜಿಮ್ ಮೊರ್ಪೆ ಹಾಗೂ ಅವರ ಜತೆ ಪಿಪಿಇ ಕಿಟ್ ಧರಿಸಿದ ವೈದ್ಯಕೀಯ ತಂಡ ಇರುವ ಫೋಟೋ ವೈರಲ್ ಆಗಿದೆ.
“ನಾನು ಶಸ್ತ್ರಚಿಕಿತ್ಸೆಯನ್ನು, ಖುಷಿಪಟ್ಟು ಅನುಭವಿಸುತ್ತಿದ್ದೆ. ಎಚ್ಚರಿದ್ದು ಪ್ರಕ್ರಿಯೆ ಅರಿಯುವುದು ನನಗೊಂದು ಅಚ್ಚರಿಯ ವಿಷಯವಾಗಿತ್ತು. ವೈದ್ಯಕೀಯ ಉಪಕರಣಗಳ ಶಬ್ದ ನನಗೆ ಸಂಗೀತ ಕೇಳಿದಂತೆ ಇತ್ತು. ಶಸ್ತ್ರಚಿಕಿತ್ಸೆ ಹೇಗಾಗಬೇಕು ಎಂಬುದನ್ನು ನಿರ್ಧರಿಸುವ ತಂಡದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ ವ್ಯಕ್ತಿ ನಾನಾಗಿದ್ದೆ” ಎಂದು ಜಿಮ್ ಯಾರ್ಕ್‌ಷೈರ್ ಪೋಸ್ಟ್ ಗೆ ಹೇಳಿಕೊಂಡಿದ್ದಾರೆ.
ಫೋಟೋ ನೋಡಿದವರು ಮೊದಲು ಇದನ್ನು ನಂಬುವುದಿಲ್ಲ. “OMG, ನೀನು ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೀಯಾ…..” ಎಂದು ಅಚ್ಚರಿ ವ್ಯಕ್ತಪಡಿಸಿ, ವಾಪಸ್ ಸಂದೇಶ ಕಳಿಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಎಚ್ಚರಿರುವ ಒಂದು ಅವಕಾಶ ನನಗೆ ಸಿಕ್ಕಿತ್ತು. ನಾನು ಮಾತ್ರ ನನ್ನ ದೇಹದ ಭಾಗದ ಸಮಸ್ಯೆಯನ್ನು ನಿಖರವಾಗಿ ಗುರುತಿಸಲು ಸಾಧ್ಯ. ಇದರಿಂದ ಎಚ್ಚರಿದ್ದ ನಾನು ವೈದ್ಯಕೀಯ ತಂಡಕ್ಕೆ ಗಡ್ಡೆಯನ್ನು ತೆಗೆಯಲು ಸಾಕಷ್ಟು ಸಲಹೆ ನೀಡಿದೆ ಎದು ಜಿಮ್ ಹೇಳಿದ್ದಾರೆ.
ಲಕ್ಷದಲ್ಲಿ ಒಬ್ಬರಿಗೆ ಆಗುವ ಬ್ರೇನ್ ಟ್ಯೂಮರ್ ಅವರಿಗೆ ಆಗಿತ್ತು. ಕಾಕತಾಳೀಯ ಎಂಬಂತೆ ಅವರ ಪತ್ನಿ ಗಿಲ್ ಅವರಿಗೂ ಇದೇ ರೀತಿಯ ಮಿದುಳಿನ ಗಡ್ಡೆಯಾಗಿತ್ತು. 18 ವರ್ಷದ ಹಿಂದೆ ಅವರನ್ನು ಮೂರು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಲಾಗಿತ್ತು.