ರೋಮ್: ಸಾಮಾನ್ಯ ಕೋನ್ ಒಂದರಲ್ಲಿ ಎರಡು ದೊಡ್ಡ ಚಮಚ ಐಸ್‌ಕ್ರೀಂ ಹಾಕಬಹುದು. ಅದಕ್ಕೂ ಹೆಚ್ಚು ಹಾಕಿದರೆ, ಕರಗಿ ಕೈಯ್ಯೆಲ್ಲ ರಾಡಿಯಾಗಿಬಿಡುತ್ತದೆ. ಇದು ಐಸ್‌ಕ್ರೀಂ ಪ್ರಿಯರಿಗೆ ಗೊತ್ತಿರುವ ಸಾಮಾನ್ಯ ಸಂಗತಿ. ಆದರೆ, ಇಲ್ಲೊಬ್ಬ ಅಂಥ ಸಾಮಾನ್ಯ ಚಿಕ್ಕ ಕೋನ್ ಒಂದರಲ್ಲಿ ನೂರಾರು ಚಮಚ ಐಸ್‌ಕ್ರೀಂ ಹಾಕಿ ಗಿನ್ನೆಸ್ ರೆಕಾರ್ಡ್ ಮಾಡಿಬಿಟ್ಟಿದ್ದಾನೆ.
ಇಟಲಿಯ ಡಿಮಿಟ್ರಿ ಪನ್ಸಿರಾ ಎಂಬಾತ ಸಾಮಾನ್ಯ ಕೋನ್ ಒಂದರಲ್ಲಿ 125 ಸ್ಕೂಪ್ ಐಸ್‌ಕ್ರೀಂ ಹಾಕಿ, ಬ್ಯಾಲೆನ್ಸ್ ಮಾಡಿ, ತಿಂದು ತೋರಿಸಿದ್ದಾನೆ. 2013 ರಲ್ಲಿ ಈತನೇ ಕೋನ್ ನಲ್ಲಿ 85 ಐಸ್‌ಕ್ರೀಂ ಹಾಕಿ ಗಿನ್ನೆಸ್ ರೆಕಾರ್ಡ್ ಮಾಡಿದ್ದ. ಆದರೆ, ಆಶ್ರಿತಾ ಫರ್ಮಾನ್ ಎಂಬ ವ್ಯಕ್ತಿ ಒಂದು ಕೋನ್‌ನಲ್ಲಿ 123 ಚಮಚ ಐಸ್‌ಕ್ರೀಂ ಹಾಕಿ ಬ್ಯಾಲೆನ್ಸ್ ಮಾಡಿ ಡಿಮಿಟ್ರಿ ಪನ್ಸಿರಾ ದಾಖಲೆ ಮುರಿದಿದ್ದ. ಡಿಮಿಟ್ರಿ ಈಗ ಮತ್ತೊಮ್ಮೆ ಪ್ರಯತ್ನಿಸಿ ಗಿನ್ನೆಸ್‌ನಲ್ಲಿ ತಮ್ಮ ಹೆಸರನ್ನು ಮರು ಸ್ಥಾಪಿಸಿದ್ದಾನೆ.
ಈತ ಮಾಡಿದ ದಾಖಲೆಯ ವಿಡಿಯೋವನ್ನು ಗಿನ್ನೆಸ್ ರೆಕಾರ್ಡ್‌ಗಾಗಿಯೇ ಇರುವ ವಿಶೇಷ ಕಾರ್ಯಕ್ರಮ ಲಾ ನೊಟ್ಟೆ ಡೈ ರೆಕಾರ್ಡ್‌ನಲ್ಲಿ ಪ್ರದರ್ಶಿಸಲಾಗಿದೆ. ಕಳೆದ ಒಂದೇ ವಾರದಲ್ಲಿ ವಿಶ್ವದಲ್ಲಿ ಮೂರು ಗಿನ್ನೆಸ್ ರೆಕಾರ್ಡ್ ಮಾಡಲಾಗಿದೆ ಎಂಬುದು ಇನ್ನೊಂದು ವಿಶೇಷ.