ಪಾರ್ಕಿಂಗ್ ಮಾಡಿರುವ ಜಾಗದಿಂದಲೇ ದ್ವಿಚಕ್ರ ವಾಹನಗಳ ಕಳ್ಳತನವಾಗುವುದು ಜಗತ್ತಿನಾದ್ಯಂತ ಬಹಳ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಅದರಲ್ಲೂ ಬೈಸಿಕಲ್, ಬೈಜ್, ಸ್ಕೂಟರ್‌ಗಳು ಆಗಾಗ ಕಳುವಾಗುತ್ತಲೇ ಇದ್ದು, ಪೊಲೀಸರಿಗೆ ಒಂದು ದೊಡ್ಡ ತಲೆನೋವಾಗಿದೆ.
ಜಪಾನ್‌ನ 29 ವರ್ಷದ ಯುವಕನೊಬ್ಬ ತನ್ನ ಬೈಸಿಕಲ್ ಅನ್ನು ಕಳ್ಳತನವಾಗದಂತೆ ನೋಡಿಕೊಳ್ಳಲು ವಿಶಿಷ್ಟ ತಂತ್ರವೊಂದನ್ನು ಹೂಡಿದ್ದಾನೆ. ತನ್ನ ಬೈಕ್‌ನ ಸೀಟ್ ಮೇಲೆ ಪಕ್ಷಿಯ ಹಿಕ್ಕೆಯಂಥ ಸ್ಟಿಕ್ಕರ್ ಅಂಟಿಸುವ ಮೂಲಕ ಕಳ್ಳರಿಗೆ ತನ್ನ ಬೈಸಿಕಲ್ ಕದಿಯಲು ಮನಸ್ಸಾಗದಂತೆ ಮಾಡುವುದು ಈತನ ಐಡಿಯಾ.
ಜಪಾನ್‌ನಲ್ಲಿ 2018ರಲ್ಲಿ 35,395 ಬೈಕ್‌ಗಳು ಕಳ್ಳತನವಾಗಿದ್ದು, ಇವುಗಳ ಪೈಕಿ 42% ಬೈಕ್‌ಗಳಿಗೆ ಬೀಗವನ್ನೂ ಸಹ ಜಡಿಯಲಾಗಿತ್ತು. ಇದರಿಂದ ಪ್ರೇರಿತನಾದ ಮೊಟೋಕಿ ರೆಯೋಗಾ ಲಾಕ್ ಮಾಡದೇ ಇರುವ 1000 ಬೈಕ್‌ಗಳ ಸೀಟ್ ಗಳ ಮೇಲೆ ಈ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾನೆ. ಅಚ್ಚರಿಯೆಂದರೆ ಇವುಗಳ ಪೈಕಿ ಒಂದೇ ಒಂದು ಬೈಕ್ ಸಹ ಕಳ್ಳತನವಾಗಿಲ್ಲ. ಮೊಟೋಕಿಯ ಈ ಜಾಣ ಅನ್ವೇಷಣೆಗೆ ನೆರವಾಗಲೆಂದು ಸಾರ್ವಜನಿಕರು ದೇಣಿಗೆ ರೂಪದಲ್ಲಿ 4,50,000 ಯೆನ್‌ಗಳನ್ನು ಕೊಟ್ಟಿದ್ದಾರೆ.