ಯಾವುದೋ ಗ್ಯಾನದಲ್ಲಿ ವಸ್ತುವೊಂದನ್ನು ಎಸೆದುಬಿಟ್ಟು ಬಳಿಕ ಅದರ ಬೆಲೆ ತಿಳಿದ ಮೇಲೆ ವಿಷಾದಪಟ್ಟ ಘಟನೆ ನಮ್ಮೆಲ್ಲರ ಲೈಫ್‌ನಲ್ಲಿ ಆಗಿಯೇ ಇರುತ್ತದೆ ಅಲ್ಲವೇ?
ಬ್ರಿಟನ್‌ನ ಈ ವ್ಯಕ್ತಿ ದಶಲಕ್ಷಗಳ ಲೆಕ್ಕದಲ್ಲಿ ಇದ್ದ ಬಿಟ್‌ಕಾಯಿನ್‌ಗಳ ಮಾಹಿತಿ ಇದ್ದ ಹಾರ್ಡ್‌ಡಿಸ್ಕ್ ಒಂದನ್ನು ಹೀಗೇ ಎಸೆದು ಇದೀಗ ಪರಿತಪಿಸುತ್ತಿದ್ದಾರೆ.
ಜೇಮ್ಸ್ ಹೊವೆಲ್ಸ್ ಹೆಸರಿನ 35 ವರ್ಷದ ಈ ಐಟಿ ಉದ್ಯೋಗಿ ಬ್ರಿಟನ್‌ನ ನ್ಯೂಪೋರ್ಟ್‌ನವರು. 7,500 ಘಟಕಗಳಷ್ಟು ಕ್ರಿಪ್ಟೋಕರೆನ್ಸಿ ಇದ್ದ ಹಾರ್ಡ್ ಡಿಸ್ಕ್‌ಅನ್ನು 2013ರಲ್ಲಿ ಗೊತ್ತಿಲ್ಲದೇ ಎಸೆದುಬಿಟ್ಟಿರುವುದಾಗಿ ಜೇಮ್ಸ್ ಹೇಳಿಕೊಂಡಿದ್ದಾರೆ. ಆಗಿನ ದಿನಗಳಲ್ಲಿ ಬಿಟ್‌ಕಾಯಿನ್‌ಗಳ ಮೌಲ್ಯ ಅಷ್ಟೇನೂ ಇರಲಿಲ್ಲ. ಆದರೆ ಇದೇ ಬಿಟ್‌ಕಾಯಿನ್‌ಗಳ ಬೆಲೆಯು 230 ದಶಲಕ್ಷ ಪೌಂಡ್ ಮುಟ್ಟಿದೆ…!
ನಿಧಾನವಾಗಿ ತಾವೆಂಥ ಎಡವಟ್ಟು ಮಾಡಿಕೊಂಡೆ ಎಂದು ತಿಳಿದ ಹೊವೆಲ್ಸ್, ನ್ಯೂಪೋರ್ಟ್ ಸಿಟಿಯ ತ್ಯಾಜ್ಯ ಸಂಗ್ರಹಣೆಯ ಪ್ರದೇಶಗಳನ್ನು ಶೋಧಿಸಲು ಅನುಮತಿ ಕೋರಿದ್ದಾರೆ. ಕಳೆದು ಹೋದ ತಮ್ಮ ಹಾರ್ಡ್ ಡ್ರೈವ್ ಹುಡುಕಿಕೊಟ್ಟವರಿಗೆ ಮಿಲಿಯನ್‌ಗಟ್ಟಲೇ ಪೌಂಡ್ ಮೌಲ್ಯದ ಬಹುಮಾನಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ, ಜರ್ಮನಿ ಮೂಲದ ಸ್ಯಾನ್‌ಫ್ರಾನ್ಸಿನ್ಸಕೋ ಪ್ರೋಗ್ರಾಮರ್ ಒಬ್ಬರು ಹಾರ್ಡ್‌ಡ್ರೈವ್ ಒಂದರ ಪಾಸ್‌ವರ್ಡ್ ಮರೆತ ಕಾರಣದಿಂದ $220 ದಶಲಕ್ಷ (1800 ಕೋಟಿ ರೂ.ಗಳು) ಕಳೆದುಕೊಳ್ಳುವ ಭೀತಿಯಲ್ಲಿರುವ ವಿಷಯವೂ ಸಹ ಸುದ್ದಿಯಲ್ಲಿದ್ದು, ಬಿಟ್‌ಕಾಯಿನ್‌ಗಳನ್ನು ಸೇಫ್ ಆಗಿ ಇಡುವುದು ಅದೆಷ್ಟು ಸವಾಲಿನ ಕೆಲಸ ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ.