ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಪ್ರಳಯಾಂತಕ ಹ್ಯಾಕರ್ ಒಬ್ಬರನ್ನು ಡಚ್ ನ್ಯಾಯಾಂಗ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ವಿಕ್ಟರ್ ಗೆವರ್ಸ್ ಹೆಸರಿನ ಈ ವ್ಯಕ್ತಿ ’ಎಥಿಕಲ್ ಹ್ಯಾಕ್’ ಮಾಡಿದ ಕಾರಣದಿಂದಾಗಿ ಆತನ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ತೆಗೆದುಕೊಂಡಿಲ್ಲ. ಅಕ್ಟೋಬರ್ 22ರಂದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ, ತಾನು ಅಮೆರಿಕ ಅಧ್ಯಕ್ಷರ ಟ್ವಿಟರ್ ಖಾತೆಯನ್ನೇ ಹ್ಯಾಕ್ ಮಾಡಿದ್ದೇನೆ ಎಂದು ಹೇಳಿದ್ದ ಗೆವರ್ಸ್ ಈ ಸಂಬಂಧ ಕೆಲವೊಂದು ಸ್ಕ್ರೀನ್‌ಶಾಟ್‌ಗಳನ್ನು ಶೇರ್ ಮಾಡಿಕೊಂಡು ಆ ಖಾತೆಯಲ್ಲಿ ಏನೆಲ್ಲಾ ಇದೆ ಎಂದು ಪ್ರಚುರಪಡಿಸಿದ್ದರು.
ಬಿಬಿಸಿ ವರದಿ ಪ್ರಕಾರ ಅಧ್ಯಕ್ಷರ ಟ್ವಿಟರ್ ಖಾತೆಯ ಪಾಸ್‌ವರ್ಡ್ ‘MAGA2020!’ ಇದೆ ಎಂದು ತಿಳಿದು ಬಂದಿದೆ. ಟ್ರಂಪ್ ಯಾವಾಗಲೂ ಭಜಿಸುವ ’ಮೇಕ್ ಅಮೆರಿಕ ಗ್ರೇಟ್ ಅಗೇನ್’ ಕಿರು ರೂಪ ಇದಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ, ಹೈ ಪ್ರೊಫೈಲ್ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳಲ್ಲಿ ಏನಾದ್ರೂ ಭದ್ರತಾ ದೌರ್ಬಲ್ಯ ಇದೆಯೇ ಎಂದು ನೋಡುತ್ತಿದ್ದ ವೇಳೆ ತನಗೆ ಈ ಫಲಿತಾಂಶ ಸಿಕ್ಕಿದೆ ಎಂದು ಗೆವರ್ಸ್ ತಿಳಿಸಿದ್ದಾರೆ.
”ನಾಲ್ಕು ಬಾರಿ ಪಾಸ್‌ವರ್ಡ್ ಗೆಸ್ ಮಾಡಿ ವಿಫಲವಾದ ಬಳಿಕ ಅಕೌಂಟ್ ಬ್ಲಾಕ್ ಆಗಬಹುದು ಎಂದುಕೊಂಡಿದ್ದೆ, ಆದರೆ ಐದನೇ ಪ್ರಯತ್ನದಲ್ಲಿ ಲಾಗಿನ್ ಆಗಲು ಸಫಲನಾದೆ” ಎಂದು ಗೆವರ್ಸ್, ಖುದ್ದು ಈ ಲಾಗಿನ್ ವಿಚಾರವನ್ನು ತಾನಾಗಿಯೇ ಕಾನೂನು ಪಾಲನಾ ಪಡೆಗಳ ಗಮನಕ್ಕೆ ತಂದಿದ್ದಾರೆ.
ಇದಾದ ಬಳಿಕ ಖುದ್ದು ತಾನೇ ಟ್ರಂಪ್‌ಗೆ ಇ-ಮೇಲ್ ಮಾಡುವ ಮೂಲಕ, ತಮ್ಮ ಟ್ವಿಟರ್ ಪಾಸ್‌ವರ್ಡ್‌ಗೆ ಎರಡು ಹಂತದ ಅಥೆಂಟಿಕೇಷನ್ ಮೂಲಕ ಬಲವಾದ ಭದ್ರತೆ ಕೊಟ್ಟುಕೊಳ್ಳಲು ಸೂಚಿಸಿದ್ದಾಗಿ ತಿಳಿಸಿದ್ದಾರೆ.
ಆದರೆ ಈ ವಿಚಾರವನ್ನು ಅಲ್ಲಗಳೆದಿರುವ ಟ್ವಿಟರ್, ಅಮೆರಿಕ ಅಧ್ಯಕ್ಷರ ಖಾತೆ ಹ್ಯಾಕ್ ಆಗಿರುವ ಬಗ್ಗೆ ತನ್ನಲ್ಲಿ ಯಾವುದೇ ಕುರುಹುಗಳಿಲ್ಲ ಎಂದು ತಿಳಿಸಿದೆ.