ನಿಮ್ಮ ಬ್ಯಾಂಕ್ ಖಾತೆಗೆ ಏಕಾಏಕಿ 1 ಕೋಟಿ ರೂಪಾಯಿ ಬಂದು ಬಿದ್ದರೆ ನಿಮಗೇನು ಅನ್ನಿಸುತ್ತದೆ ? ನೀವೇನು ಮಾಡುತ್ತೀರಿ ? ಆಶ್ಚರ್ಯ, ಗಾಬರಿ, ಗೊಂದಲ ಎಲ್ಲ ಒಟ್ಟೊಟ್ಟಿಗೆ ಆಗುತ್ತದೆಯಲ್ಲವೇ ?
ಅಮೆರಿಕಾದ ಕ್ರಿಸ್ಟಲ್ ನಗರದಲ್ಲಿನ 73 ವರ್ಷದ ಥಾಮಸ್ ಫಾಲಿಂಗ್ ಎಂಬುವರ ಬ್ಯಾಂಕ್ ಖಾತೆಗೆ ಇದ್ದಕ್ಕಿದ್ದಂತೆ 1.50 ಲಕ್ಷ ಡಾಲರ್ (1.09 ಕೋಟಿ ರೂಪಾಯಿ) ಜಮೆ ಆಗಿದೆ. ಇದನ್ನ ಕಂಡು ಆಶ್ಚರ್ಯಗೊಂಡ ಥಾಮಸ್, ಬ್ಯಾಂಕಿನವರ ಲೊಪದೋಷದಿಂದ ಇಷ್ಟೊಂದು ಹಣ ಬಂದಿರಬೇಕು, ಇಲ್ಲದಿದ್ದರೆ ಯಾರದ್ದೋ ಖಾತೆಗೆ ಹೋಗಬೇಕಾದ್ದು ತನ್ನ ಖಾತೆಗೆ ತಪ್ಪಿ ಬಂದಿರಬೇಕು ಎಂದು ಯೋಚಿಸುತ್ತಾರೆ.
ಪೇಚೆಕ್ ಪ್ರೊಟೆಕ್ಷನ್ ಪ್ರೊಗ್ರಾಮ್ ಮೂಲಕ ಪರಿಶೀಲಿಸಿದಾಗ, ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರ ನೆರವಿಗಾಗಿ ಸಣ್ಣ ಉದ್ಯಮ ಮಾಡಲು ಸರ್ಕಾರ ಕಳುಹಿಸಿದ ಹಣವದು ಎಂಬುದು ಗೊತ್ತಾಗುತ್ತದೆ.
ಆದರೆ, ಥಾಮಸ್ ಅಂತಹ ಉದ್ದಿಮೆಯನ್ನೂ ಸ್ಥಾಪಿಸಲು ಹೊರಟಿರಲಿಲ್ಲ. ಅಂತಹ ಯಾವ ಅರ್ಜಿ, ಪ್ರಸ್ತಾವನೆಗಳನ್ನೂ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕೊನೆಗೆ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದು, ಅಷ್ಟೂ ಹಣ ಮರಳಿಸಿದ್ದಾರೆ.
ನಿಜವಾದ ಫಲಾನುಭವಿಗೆ ತಲುಪಬೇಕಾದ ಹಣ, ನನ್ನ ಖಾತೆಗೆ ಬಂದಿದ್ದು ಸರಿ ಕಾಣಲಿಲ್ಲ. ಎಲ್ಲೋ ಏನೋ ಎಡವಟ್ಟಾಗಿದೆ ಎಂದುಕೊಂಡು ಅದನ್ನು ಮರಳಿಸಿದ್ದೇನೆ. ಅರ್ಹ ಫಲಾನುಭವಿಗೆ ಹಣ ತಲುಪಿ ಉಪಯೋಗವಾಗಲಿ ಎಂದು ಥಾಮಸ್ ಆಶಿಸಿದ್ದಾರೆ.