ಗಂಟೆಗೆ 140 ಕಿಮಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲಿ ಚಾಲಕ ನಿದ್ರೆ ಮಾಡಿದ್ದ. ಆದರೂ ಅಪಘಾತವಾಗಿಲ್ಲ. ಆದರೆ, ಪೊಲೀಸರ ಅತಿಥಿಯಾದ ಘಟನೆ ಕೆನಡಾದಲ್ಲಿ ನಡೆದಿದೆ. ಅಲ್ಬರ್ಟ್ ಪ್ರಾಂತ್ಯದ ಪೊನಕಾ ನಗರದಲ್ಲಿ ಘಟನೆ ನಡೆದಿದ್ದು, ಪೊಲೀಸರು ಈ ಸಂಬಂಧ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಗಂಟೆಗೆ 110 ಕಿಮೀ ವೇಗದಲ್ಲಿ ಚಲಿಸಲು ಮಾತ್ರ ಅಲ್ಬರ್ಟ್ ಪ್ರಾಂತ್ಯದಲ್ಲಿ ಅವಕಾಶವಿದೆ. ಆದರೆ ಒಂದು ಟೆಸ್ಲಾ ಕಾರು 140 ಕಿಮೀ ವೇಗದಲ್ಲಿ ಪೊನೊಕಾ ಹೈವೆ ನಂ 2 ರಲ್ಲಿ ಸಂಚರಿಸುತ್ತಿದ್ದು, ಚಾಲಕ ಮುಂದಿನ ಸೀಟನ್ನು ಸಂಪೂರ್ಣ ಆವರಿಸಿಕೊಂಡು ಮಲಗಿದ್ದಾನೆ ಎಂದು ಅಲ್ಬರ್ಟ್ ಆರ್.ಸಿ.ಎಂ.ಪಿ.ಗೆ ದೂರು ಬಂದಿತ್ತು. ತಕ್ಷಣ ಕಾರನ್ನು ನಿಲ್ಲಿಸಿ 20 ವರ್ಷದ ಚಾಲಕನ ವಿರುದ್ಧ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ಸೆಕ್ಷನ್ ನಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟೆಸ್ಲಾ ಕಾರಿನಲ್ಲಿ ಅಟೋ ಪೈಲಟ್ ವ್ಯವಸ್ಥೆ ಇದ್ದು, ಇದು ಮಾನವನ ತಪ್ಪುಗಳಿಂದ ಉಂಟಾಗುವ ಅಪಘಾತಗಳನ್ನು ತಪ್ಪಿಸುತ್ತದೆ ಎಂದು ಕಂಪನಿ ಸಿಇಒ ಎಲೊನ್ ಮಸ್ಕ್ ಹೇಳಿದ್ದಾರೆ. ಕಾರು ಸೇಫ್ ಡ್ರೈವಿಂಗ್ ಮೋಡ್ ನಲ್ಲಿದ್ದಾಗ ಚಾಲಕ ಸ್ಟೇರಿಂಗ್ ಹಿಡಿದುಕೊಂಡಿರಬೇಕು ಎಂದೇ ಇಲ್ಲ. ಇದು ಸಂಪೂರ್ಣ ಮಾನವ ರಹಿತ ಚಾಲನಾ ವ್ಯವಸ್ಥೆಯಲ್ಲ. ಅಥವಾ ಅಟೋ ಪೈಲಟ್ ಮೋಡ್ ಗೆ ಪ್ರತ್ಯೇಕ ಕಿಟ್ ವ್ಯವಸ್ಥೆ ಇಲ್ಲ. ಆದರೆ, ಅಟೊ ಕಂಟ್ರೋಲ್ ಎಕ್ಸಲರೇಟರ್ ಹಾಗೂ ಬ್ರೇಕ್ ವ್ಯವಸ್ಥೆ ಇದೆ ಎಂದು ಕಂಪನಿ ತಿಳಿಸಿದೆ.