ಮನೆಯ ಕಂಪ್ಯೂಟರ್‌ನಿಂದ ನಕಲಿ ಚೆಕ್ ಒಂದರ ಪ್ರಿಂಟ್ ತೆಗೆದುಕೊಂಡು, ಅದರಿಂದ ಪೋರ್ಶ್ ಕಾರೊಂದನ್ನು ಖರೀದಿ ಮಾಡಿದ್ದ ಫ್ಲಾರಿಡಾದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದೇ ರೀತಿಯಲ್ಲಿ ಆತ ಲಕ್ಸೂರಿ ವಾಚ್‌ಗಳನ್ನು ಖರೀದಿ ಮಾಡಲು ನೋಡಿದ್ದ.
ವಿಲಿಯಮ್ ಕೆಲ್ಲೆ ಎಂಬ 42 ವರ್ಷದ ಈತನ ಮೇಲೆ ಐಷಾರಾಮಿ ಕಾರಿನ ಖರೀದಿಯಲ್ಲಿ ಅಕ್ರಮವೆಸಗಿದ ಆಪಾದನೆ ಮೇಲೆ ಇಲ್ಲಿನ ವಾಲ್ಟನ್ ಶರೀಫ್ ಪೊಲೀಸರು ಬಂಧಿಸಿದ್ದಾರೆ.
ಫ್ಲಾರಿಡಾದ ಡೆಸ್ಟಿನ್‌ನಲ್ಲಿ ಇರುವ ಪೋರ್ಶ್ ಡೀಲರ್‌ಶಿಪ್ ಒಂದರಲ್ಲಿ, ಜುಲೈ 27ರಂದು ಈ ನಕಲಿ ಚೆಕ್ ಅನ್ನು ಕೊಟ್ಟು, ಪೋರ್ಶ್ 911 ಕಾರನ್ನು ತನ್ನ ಮನೆಗೆ ಡ್ರೈವ್ ಮಾಡಿಕೊಂಡು ಹೋಗಿದ್ದ ಈತ. ಬಳಿಕ $139,203.05 (ಒಂದು ಕೋಟಿ ರೂ.ಗೂ ಅಧಿಕ) ಮೌಲ್ಯದ ಆ ಚೆಕ್ ನಕಲಿ ಎಂದು ತಿಳಿದುಬಂದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು.
ಈ ವ್ಯಕ್ತಿ ಇದೇ ರೀತಿ $61,521ಗಳ ಮತ್ತೊಂದು ಚೆಕ್ ಅನ್ನು ಬರೆದು, ಮೂರು ರೋಲೆಕ್ಸ್ ವಾಚುಗಳನ್ನು ಖರೀದಿ ಮಾಡಲು ಮುಂದಾಗಿದ್ದ. ಆದರೆ ಈ ಬಾರಿ ಆತನ ಯೋಜನೆ ಫಲಿಸಲಿಲ್ಲ. ಆತ ವಾಚುಗಳನ್ನು ಖರೀದಿಸಲು ನೋಡಿದ್ದ ಜ್ಯುವೆಲ್ಲರ್ ಅಂಗಡಿಯವರು, ಚೆಕ್ ಮೊತ್ತ ಡ್ರಾ ಆಗುವವರೆಗೂ ತಡೆಹಿಡಿದಿದ್ದರು.