ನ್ಯೂಯಾರ್ಕ್: ಕಾಲು, ತೋಳಿಲ್ಲದ ಯುವಕ ತನ್ನನ್ನು ಸ್ವತಃ ಹಾಸ್ಯ ಮಾಡಿಕೊಂಡ ವಿಡಿಯೋ ಟಿಕ್ ಟಾಕ್ ನಲ್ಲಿ ಎಲ್ಲಿಲ್ಲದಷ್ಟು ಸದ್ದು ಮಾಡಿದೆ.
ತನ್ಮನ್ನು “ಅನ್ ಆರ್ಮ್ಡ್ ಫ್ರ್ಯಾಂಕ್” ಎಂದು ಸ್ವತಃ ಕರೆದುಕೊಂಡಿರುವ ನ್ಯೂಯಾರ್ಕ್ ನ ಕೊಲ್ಬಿ ವೆನ್ ವೂರ್ಷಿ ಎಂಬ 24 ವರ್ಷದ ಯುವಕ ಮಾಡಿದ ವಿಡಿಯೋವನ್ನು 15 ಲಕ್ಷ ಜನ ನೋಡಿದ್ದು, ಆತನ ಖಾತೆಗೆ 80 ಸಾವಿರ ಜನ ಸಬ್ ಸ್ಕ್ರೈಬರ್ ಆಗಿದ್ದಾರೆ.
ತ್ರೊಂಬೊಸೈಟೋಪೇನಿಯಾ ಅಬ್ಸೆಂಟ್ ರೆಡ್ಯೂಸ್ ಸಿಂಡ್ರೋಮ್ (ಟಿಎಆರ್) ಎಂಬ ಆನುವಂಶೀಯ ಕಾಯಿಲೆಯಿಂದ ಯುವಕ ಬಳಲುತ್ತಿದ್ದಾನೆ. ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಬರುವ ಈ ಕಾಯಿಲೆ ಇದ್ದವರ ಎಲುಬುಗಳು ಬೆಳವಣಿಗೆ ಆಗುವುದಿಲ್ಲ. ಕೊಲ್ಬಿ ಅವರಿಗೆ ತೋಳುಗಳಿಲ್ಲ. ಭುಜಕ್ಕೆ ತಾಗಿಕೊಂಡು ನೇರವಾಗಿ ಹಸ್ತವಿದೆ. ಇನ್ನು ಮೊಳಕಾಲು ಕೆಳಗೆ ಕಾಲುಗಳು ಬೆಳವಣಿಗೆಯೂ ಆಗಿಲ್ಲ.
ಕೊಲ್ಬಿ ಅವರ ಜೈವಿಕ ತಂದೆ – ತಾಯಿಗಳಿಗೆ 8 ಮಕ್ಕಳು, ಅಂಗವಿಕಲರಾದ ಇವರನ್ನು ಅನುಕೂಲಸ್ಥ ಕುಟುಂಬಕ್ಕೆ ಸಾಕಲು ನೀಡಿದರು. ಸುಮಾರು ಆರು ವರ್ಷದವರೆಗೂ ಅವರಿಗೆ ನಡೆಯಲು ಬರುತ್ತಿರಲಿಲ್ಲ. ಈಗ ಅಂತೂ ತೆವಳಿಕೊಂಡು ಓಡಾಡುವುದನ್ನು ಕಲಿತಿದ್ದಾರೆ. ಅಷ್ಟೇ ಅಲ್ಲ ಸ್ವತಃ ಸ್ನಾನ ಮಾಡುತ್ತಾರೆ. ಬಟ್ಟೆ ಹಾಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ.
ಕಾಲೇಜ್ ಕಲಿಯುತ್ತಿರುವ ಅವರು, ತಮ್ಮ ಸುತ್ತಲಿನ ಜನರನ್ನು ಹಾಸ್ಯ, ನಗೆಚಟಾಕಿಗಳ ಮೂಲಕ ಖಷಿಪಡಿಸಲು ಬಯಸುತ್ತಾರೆ. “ನನ್ನನ್ನು ನೋಡಿ ಮರುಕ ಪಡುವವರ ಬಗ್ಗೆ ನನಗೆ ಸಿಟ್ಟು ಬರುತ್ತದೆ. ನನ್ನ ಸ್ಥಿತಿಯ ಬಗ್ಗೆ ನಾನು ಒಮ್ಮೆಯೂ ದುಃಖ ಪಟ್ಟಿಲ್ಲ. ಆದರೆ ನನ್ನನ್ನು ದಿಟ್ಟಿಸಿ ನೋಡುವವರನ್ನು ನೋಡಿ ಬೇಸರ ಉಂಟಾಗುತ್ತದೆ” ಎನ್ನುತ್ತಾರೆ ಅವರು.