ಮಾಲಿಯ ಮಹಿಳೆಯೊಬ್ಬರು ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಈ ಎಲ್ಲಾ ಮಕ್ಕಳು ಆರೋಗ್ಯದಿಂದ ಇವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.ಇದೊಂದು ಅತ್ಯಂತ ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾದ 25 ವರ್ಷದ ಗರ್ಭಿಣಿ ಹಲಿಮಾ ಸಿಸ್ಸೆ ಈ ರೀತಿ 9 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಕೆ ಗರ್ಭಿಣಿಯಾಗಿದ್ದ ವೇಳೆ ವೈದ್ಯರು ಈಕೆಯ ಗರ್ಭದಲ್ಲಿ 7 ಮಕ್ಕಳು ಇರಬಹುದು ಎಂದು ಅಂದಾಜಿಸಿದ್ದರು. ಆದರೆ ಬಳಿಕ ಈಕೆಯ ಹೊಟ್ಟೆಯಲ್ಲಿ 9 ಮಕ್ಕಳು ಇರೋದು ಹೆರಿಗೆಯ ವೇಳೆ ತಿಳಿದಿದೆ.
9 ಮಕ್ಕಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಮಕ್ಕಳಿದ್ದು ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದರೆ ಎಂದು ಮಾಲಿಯ ಆರೋಗ್ಯ ಸಚಿವ ಫಂತಾ ಸಿಬಿ ಹೇಳಿದ್ದಾರೆ.
ಹೆರಿಗೆಗೂ ಮುನ್ನ ಸಿಸ್ಸೆ 7 ಮಕ್ಕಳ ನಿರೀಕ್ಷೆಯಲ್ಲಿದ್ದರು. ಅಲ್ಟ್ರಾಸೌಂಡ್ ಪರೀಕ್ಷೆಯ ವೇಳೆ 2 ಮಕ್ಕಳು ಮಿಸ್ ಆಗಿದ್ದರಿಂದ ಆಕೆ ತನ್ನ ಗರ್ಭದಲ್ಲಿ ಕೇವಲ 7 ಮಕ್ಕಳಿವೆ ಎಂದೇ ಭಾವಿಸಿದ್ದರು. ಈ ಎಲ್ಲಾ ಮಕ್ಕಳನ್ನ ಸಿ ಸೆಕ್ಷನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈ ರೀತಿ 9 ಮಕ್ಕಳು ಒಂದೇ ಬಾರಿ ಜನಿಸೋದು ತೀರಾ ಅಪರೂಪದ ಪ್ರಕರಣವಾಗಿದೆ.