ನೋಬೆಲ್ ಪುರಸ್ಕೃತೆ ಮಲಾಲಾ ಯೂಸುಫ್ ಝಾಯ್ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯಶಾಸ್ತ್ರ, ಫಿಲಾಸಫಿ ಹಾಗೂ ಅರ್ಥಶಾಸ್ತ್ರಗಳಲ್ಲಿ ಬ್ಯಾಚಲರ್ ಪದವಿ ಪಡೆದುಕೊಂಡಿದ್ದಾರೆ.
ಲೇಡಿ ಮಾರ್ಗರೆಟ್ ಹಾಲ್‌ನಲ್ಲಿ ತಮ್ಮ ಪದವಿ ಮಾಡುತ್ತಿದ್ದ ಮಲಾಲಾ, ಪದವೀಧರೆಯಾದ ಖುಷಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ತನ್ನ ಕುಟುಂಬದ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಮಲಾಲಾ, ಈ ಸಂತಸದ ಕ್ಷಣಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸದ್ಯದ ಮಟ್ಟಿಗೆ ಕೊರೋನಾ ಲಾಕ್‌ಡೌನ್ ಇರುವ ಕಾರಣದಿಂದ ನೆಟ್‌ಫ್ಲಿಕ್ಸ್ ನೋಡಿಕೊಂಡು, ಒಂದಷ್ಟು ಓದಿಕೊಂಡು ಆರಾಮಾಗಿ ನಿದ್ರಿಸಿಕೊಂಡು ಈ ಸಮಯವನ್ನು ಕಳೆಯಲು ಇಚ್ಛಿಸುವುದಾಗಿ ಮಲಾಲಾ ತಿಳಿಸಿದ್ದಾರೆ. ಮಹಿಳೆಯರ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸುವ ವೇಳೆ ಇಸ್ಲಾಮಿಕ್ ತೀವ್ರಗಾಮಿಗಳ ಗುಂಡೇಟು ತಿಂದ ಮಲಾಲಾ, ಕಳೆದ 9 ವರ್ಷಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ತಮ್ಮ ಈ ಹೋರಾಟಕ್ಕೆ ಮಲಾಲಾಗೆ ನೊಬೆಲ್ ಗೌರವ ಸಂದಿದೆ.