ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಅಲೆಗಳನ್ನು ಉಂಟುಮಾಡಿದೆ ಎಂದು ಅಮೆರಿಕದ ಏಜೆನ್ಸಿಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ ಸಾವು-ನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಅಲಾಸ್ಕ ಪೆನಿನ್ಸುಲಾ ಸೇರಿದಂತೆ ಅಮೆರಿಕ ದಕ್ಷಿಣ ಕರಾವಳಿಯ ಹೆಚ್ಚಿನ ಭಾಗದಲ್ಲಿ ಸುನಾಮಿ ಅಲೆಗಳು ಆವರಿಸಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
ಸಣ್ಣ ನಗರ ಸ್ಯಾಂಡ್ ಪಾಯಿಂಟ್ ನಲ್ಲಿ ಭಾರೀ ಗಾತ್ರದ ಅಲೆ ಅಪ್ಪಳಿಸಿವೆ. ದೊಡ್ಡ ನಗರ ಆಂಕಾರೇಜ್ ನಿಂದ ಸ್ವಲ್ಪ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಕಂಡುಬಂದಿದೆ. ವ್ಯಾಪಕವಾದ ಪ್ರವಾಹ ಇಲ್ಲದಿದ್ದರೂ ಕೆಲವೆಡೆ ಸಣ್ಣಪ್ರಮಾಣದ ಸುನಾಮಿ ಅಲೆಗಳು ಕಂಡುಬಂದಿವೆ. ಕಿಂಗ್ ಕೋವ್ ಸಮೀಪ ಅಲಾಸ್ಕ ಪೆನಿನ್ಸುಲಾ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ ಎಂದು ನಗರ ಆಡಳಿತ ಅಧಿಕಾರಿ ಗ್ಯಾರಿ ಹೆನ್ನಿಘ್ ಆಂಕಾರೇಜ್ ಹೇಳಿದ್ದಾರೆ.
ಈ ಭೂಕಂಪದಿಂದ ಸಾವು ನೋವು ಮತ್ತು ಹಾನಿ ಸಂಭವಿಸುವ ಸಾಧ್ಯತೆ ಕಡಿಮೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಅಲಾಸ್ಕಾ ಭೂಕಂಪನದಿಂದ ಸಕ್ರಿಯವಾಗಿರುವ ಪೆಸಿಫಿಕ್ ರಿಂಗ್ ಆಫ್ ಫೈರ್ ನ ಭಾಗವಾಗಿದೆ. ಈ ಭೂಕಂಪದಿಂದ ಸುನಾಮಿ ಅಲೆ ಏಳಬಹುದೆಂದು ಎಂದು ಹೇಳಲಾಗಿದೆ.