
ತನ್ನ ತಾತನಿಂದ ಬಳುವಳಿಯಾಗಿ ಬಂದಿದ್ದ ಈ ಜೋಡಿ ಕನ್ನಡಕಗಳನ್ನು ಅನಾಮಧೇಯ ವ್ಯಕ್ತಿಯೊಬ್ಬರು ಹರಾಜು ಹಾಕಲು ಬಯಸಿದ್ದು, ಯುಕೆಯ ಹರಾಜು ಸಂಸ್ಥೆಗೆ ಕಳುಹಿಸಿಕೊಟ್ಟಿದ್ದಾರೆ. ಆಗಸ್ಟ್ 21 ರಂದು ಈ ಕನ್ನಡಕಗಳ ಹರಾಜು ನಡೆಯಲಿದ್ದು, ಈಗಾಗಲೇ ಆರಂಭಿಕ ಬಿಡ್ ಮೊತ್ತವಾಗಿ ಆನ್ ಲೈನ್ ನಲ್ಲಿ 6 ಸಾವಿರ ಪೌಂಡ್ ನಮೂದಿಸಲಾಗಿದೆ ಎಂದು ಹೇಳಲಾಗಿದೆ.
ಹರಾಜು ಸಂಸ್ಥೆ, ಗಾಂಧೀಜಿಯವರು ಧರಿಸುತ್ತಿದ್ದರೆನ್ನಲಾದ ಈ ಕನ್ನಡಕಗಳು 10 ಸಾವಿರದಿಂದ 15 ಸಾವಿರ ಪೌಂಡ್ ಮೊತ್ತಕ್ಕೆ ಹರಾಜಾಗಬಹುದೆಂದು ಅಂದಾಜಿಸಿದೆ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಮುನ್ನ ದಕ್ಷಿಣ ಅಫ್ರಿಕಾದಲ್ಲಿದ್ದ ಮಹಾತ್ಮ ಗಾಂಧೀಜಿಯವರು ಅಲ್ಲಿಯೂ ಸಹ ವರ್ಣಬೇಧ ನೀತಿಯ ವಿರುದ್ದ ತಮ್ಮ ಧ್ವನಿ ಎತ್ತಿದ್ದರು.
ಭಾರತಕ್ಕೆ ಬಂದ ಬಳಿಕ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಮಹಾತ್ಮ ಗಾಂಧಿ, ಅಹಿಂಸಾ ಮಾರ್ಗದ ಮೂಲಕವೇ ಬ್ರಿಟಿಷರು ಭಾರತ ಬಿಟ್ಟು ತೊಲಗುವಂತೆ ಮಾಡಲು ಯಶಸ್ವಿಯಾಗಿದ್ದರು. ವಿಶ್ವದಾದ್ಯಂತ ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಮಾರು ಹೋದ ವ್ಯಕ್ತಿಗಳಿದ್ದು, ಹೀಗಾಗಿ ಅಮೂಲ್ಯ ವಸ್ತುವಾದ ಈ ಕನ್ನಡಕಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳುವ ಸಾಧ್ಯತೆಯಿದೆ. ಈ ಕನ್ನಡಕದ ಫ್ರೇಮ್ ಚಿನ್ನದ ಲೇಪನದಿಂದ ಮಾಡಲಾಗಿದೆ ಎಂದು ಹೇಳಲಾಗಿದೆ.