ಕ್ರಿಸ್ಮಸ್ ಆಚರಣೆಯ ಪ್ರಯುಕ್ತ ಉದಾರತೆ ಮೆರೆಯಲು ಮುಂದಾಗಿರುವ ಲಂಡನ್‌ನ ಹೋಂಲೆಸ್ ಚಾರಿಟಿ ಕ್ರೈಸಿಸ್ ಸಂಸ್ಥೆಯೊಂದು ನಿರ್ಗತಿಕ ಜನರಿಗೆ ಎರಡು ವಾರಗಳ ಮಟ್ಟಿಗೆ ಹೊಟೇಲುಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡುತ್ತಿದೆ.
ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ಈ ಚಾರಿಟಿ ಸಂಸ್ಥೆಯು ಮನೆ ಇಲ್ಲದ ಮಂದಿಗೆ ದೊಡ್ಡ ಮಟ್ಟದಲ್ಲಿ ಡಾರ್ಮಿಟರಿ ವ್ಯವಸ್ಥೆ ಮಾಡುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಸೋಂಕು ಹಬ್ಬುವ ಸಾಧ್ಯತೆಗಳು ಇರುವ ಕಾರಣ ಲಂಡನ್‌ನ ನಾಲ್ಕು ಹೊಟೇಲುಗಳಲ್ಲಿ 517 ಕೋಣೆಗಳನ್ನು ಬುಕ್ ಮಾಡಿದೆ.
ಲಂಡನ್ ಹೊಟೇಲ್ ಸಮೂಹ ನಿರ್ವಹಿಸುತ್ತಿರುವ ಈ ಕೋಣೆಗಳನ್ನು ದತ್ತಿ ಉದ್ದೇಶಕ್ಕೆ ಕಡಿಮೆ ದರದಲ್ಲಿ ಬಾಡಿಗೆಗೆ ಕೊಡಲಾಗಿದೆ.
ಈ ಎಲ್ಲ ವಿಶೇಷ ಅತಿಥಿಗಳಿಗೆ ಉಚಿತವಾಗಿ ರೂಂ ಸರ್ವೀಸ್ ಮೂಲಕ ಊಟ ಪೂರೈಸಲಾಗುವುದು. ಇದರೊಂದಿಗೆ ಎಲ್ಲಾ ಫಲಾನುಭವಿಗಳಿಗೆ ವಿಶೇಷ ಕಿರು ತಂತ್ರಾಂಶವೊಂದರ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಹಾಡು ಕೇಳಲು ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ಹೊಟೇಲ್‌ನಲ್ಲಿ ಆರೋಗ್ಯ ಸೇವೆಗಳನ್ನೂ ಸಹ ಒದಗಿಸಲಾಗುವುದು.