ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರಿಗೆ ಬೈಗುಳಗಳ ಪ್ರಯೋಗ ಮಾಡುತ್ತಿದ್ದ ಪುಂಡ ಗಿಣಿಗಳ ಗುಂಪೊಂದನ್ನು ಬ್ರಿಟನ್‌ನಲ್ಲಿರುವ ಮೃಗಾಲಯದ ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದೆ.
ಆಫ್ರಿಕಾದಿಂದ ಕರೆತರಲಾದ ಈ ಐದು ಗಿಣಿಗಳನ್ನು ಲಿಂಕ್‌ಶೈರ್ ವನ್ಯಜೀವಿ ಧಾಮದಲ್ಲಿ ಒಂದೇ ಕಡೆ ಇರಿಸಲಾಗಿತ್ತು. ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರ ಬಾಯಿಂದ ಬರುತ್ತಿದ್ದ ಕೆಟ್ಟ ಪದಗಳನ್ನು ಕಲಿತುಬಿಟ್ಟ ಈ ಗಿಣಿಗಳು, ಹೋಗೋ ಬರೋ ಜನರ ಮೇಲೆಲ್ಲಾ ಪ್ರಯೋಗ ಮಾಡಲು ಶುರು ಮಾಡಿಕೊಂಡು ಬಿಟ್ಟಿವೆ.
“ಕಳೆದ 25 ವರ್ಷಗಳಿಂದ, ಕೆಟ್ಟ ಪದಗಳನ್ನು ಆಡುವುದನ್ನು ಕಲಿತ ಸಾಕಷ್ಟು ಗಿಣಿಗಳನ್ನು ನಾವು ನೋಡುತ್ತಲೇ ಬಂದಿದ್ದೇವೆ. ಆಗಾಗ ಈ ಥರ ಒಂದೊಂದು ಗಿಣಿಯನ್ನು ನೋಡಿಕೊಂಡೇ ಬರುತ್ತಿದ್ದೇವೆ. ಇದು ಸಖತ್ ಫನ್ನಿಯಾಗಿ ಇರುತ್ತದೆ. ನಿಮ್ಮನ್ನು ನೋಡಿಕೊಂಡು ಅವು ಬಯ್ಯುತ್ತಿದ್ದರೆ ಬಲೇ ಮಜವಾಗಿರುತ್ತದೆ’ ಎಂದು ಉದ್ಯಾನದ ಸಿಇಓ ಸ್ಟೀವ್ ನಿಕೋಲ್ಸ್ ತಿಳಿಸಿದ್ದಾರೆ.
ಈ ಗಿಣಿಗಳ ’ವಿಶೇಷ ಪ್ರತಿಭೆ’ ಬಗ್ಗೆ ಉದ್ಯಾನದ ಪದಾಧಿಕಾರಿಗಳಿಗೆ ವೀಕ್ಷಕರು ದೂರು ಕೊಟ್ಟ ಬಳಿಕ, ಅವುಗಳನ್ನು ಸದ್ಯ ಐಸೋಲೇಷನ್‌ನಲ್ಲಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗಿಣಿಯನ್ನೂ ಸಹ ಪ್ರತ್ಯೇಕವಾಗಿ ಇರಿಸುವ ಮೂಲಕ ಒಂದರಿಂದ ಒಂದು ಹೊಸ ಹೊಸ ಪದಗಳನ್ನು ತಂತಮ್ಮ ’ಶಬ್ದಕೋಶಕ್ಕೆ’ ಸೇರಿಸಿಕೊಳ್ಳುವುದನ್ನು ತಪ್ಪಿಸಲು ಉದ್ಯಾನದ ಆಡಳಿತ ಚಿಂತನೆ ನಡೆಸಿದೆ.