ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡಿಕೊಂಡು, ಇದೇ ವೇಳೆ ಮಕ್ಕಳನ್ನು ನಿಭಾಯಿಸಿಕೊಂಡು, ಮನೆಯ ಇತರ ಎಲ್ಲಾ ಕೆಲಸಗಳನ್ನೂ ಮಾಡಿಕೊಂಡು ಇರುವುದು ಬಲೇ ಕಷ್ಟದ ಹೊಣೆ. ಇಂಥ ಸಮಯದಲ್ಲಿ ಮನೆಯ ಒಂದಷ್ಟು ಕೆಲಸಗಳನ್ನು ಮುಂದಕ್ಕೆ ಹಾಕುವುದು ಸಹಜ.
ಆಸ್ಟ್ರೇಲಿಯಾದ ಪರ್ತ್ನಲ್ಲಿ ಎರಡು ತಿಂಗಳ ಮಟ್ಟಿಗೆ ತನ್ನ ಬಟ್ಟೆಗಳನ್ನು ಒಗೆಯದೇ ಇದ್ದ ಮಹಿಳೆಯೊಬ್ಬರು, ಬಟ್ಟೆಗಳ ದೊಡ್ಡ ರಾಶಿಯೊಂದರ ಮೇಲೆ ಕುಳಿತು ಪೋಸ್ ಕೊಡುತ್ತಾ, ಅದರ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೋಡಿ ಕಿಲಿನ್ ಹೆಸರಿನ ಈ ಮಹಿಳೆ ತನ್ನ ಮಕ್ಕಳಿಗೆ homeschooling ಮಾಡುವ ಭರದಲ್ಲಿ ಬಟ್ಟೆಗಳನ್ನು ಒಗೆದುಕೊಳ್ಳಲು ಸಾಧ್ಯವಾಗಿಲ್ಲ.
ಹೀಗಾದ ಕಾರಣ ಅವರ ಬಟ್ಟೆಗಳೇ ಒಂದು ಲಿವಿಂಗ್ ರೂಂ ತುಂಬಾ ರಾಶಿಗಟ್ಟಲೇ ಆಗಿಬಿಟ್ಟಿದ್ದವು. ಕೊನೆಗೂ ಆ ಬಟ್ಟೆಗಳನ್ನು ಬ್ಯಾಗ್ಗಳಲ್ಲಿ ತುಂಬಿಕೊಂಡು ಅವುಗಳನ್ನು ಒಗೆದು, ಇಸ್ತ್ರಿ ಮಾಡಿ ಮಡಚಿ ಇಟ್ಟಿದ್ದಾರೆ ಕಿಲಿನ್. ತನ್ನ ಈ ಬಟ್ಟೆಗಳ ರಾಶಿಗೆ “Mount-Fold-More” ಎಂದು ಹೆಸರಿಟ್ಟಿದ್ದಾರೆ ಕಿಲಿನ್.