ಬೋಸ್ಟನ್: ಹತ್ಯೆಯಾದ ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಾಹಂ ಲಿಂಕನ್ ಅವರ ರಕ್ತಸಿಕ್ತ ಕೂದಲುಗಳ ಗುಚ್ಛ ಹಾಗೂ ಅವರ ಸಾವಿನ ಕುರಿತು ಮಾಹಿತಿ ಇರುವ ಟೆಲಿಗ್ರಾಂ ಪತ್ರ 81 ಸಾವಿರ ಡಾಲರ್‌ಗೆ ಹರಾಜಾಗಿವೆ.
ಬೋಸ್ಟನ್‌ನ ಆರ್.ಆರ್. ಆಕ್ಷನ್ ಎಂಬ ಕಂಪನಿ ಶನಿವಾರ ಇವೆರಡೂ ವಸ್ತುಗಳನ್ನು ಹರಾಜು ಮಾಡಿದೆ. ಆದರೆ, ಇಷ್ಟು ಹಣ ಕೊಟ್ಟು ಅವುಗಳನ್ನು ಖರೀದಿಸಿದ ವ್ಯಕ್ತಿ ಯಾರು ಎಂಬ ಬಗ್ಗೆ ಮಾಹಿತಿ ದೊರಕಿಲ್ಲ.
ವಾಷಿಂಗ್ಟನ್ ಡಿಸಿಯ ಫೋರ್ಡ್ಸ್ ಥಿಯೇಟರ್‌ನಲ್ಲಿ ಇರುವಾಗ ವಿಲ್ಕೀಸ್ ಬೂತ್ ಎಂಬ ವ್ಯಕ್ತಿ ಅಬ್ರಾಹಂ ಲಿಂಕನ್ ಅವರನ್ನು ಗುಂಡು ಹೊಡೆದು ಕೊಲೆ ಮಾಡಿದ್ದ. ಅವರ ಮರಣೋತ್ತರ ಪರೀಕ್ಷೆಯ ವೇಳೆ ತೆಗೆದ ಸುಮಾರು 2 ಇಂಚುಗಳಷ್ಟು ಉದ್ದದ ರಕ್ತಸಿಕ್ತ ಕೂದಲುಗಳನ್ನು ಸಂರಕ್ಷಿಸಲಾಗಿತ್ತು. ಲಿಂಕನ್ ಅವರ ಪತ್ನಿ ಮೇರಿ ಟೊಡ್ ಲಿಂಕನ್ ಅವರ ಸಹೋದರ ಹಾಗೂ ಕೆಂಟುಕಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಡಾ.ಲೇಮನ್ ಬೀಚರ್ ಟೊಡ್ ಇವುಗಳನ್ನು ಕೊಡುಗೆಯಾಗಿ ಪಡೆದಿದ್ದರು ಎಂದು ಆರ್.ಆರ್. ಆಕ್ಷನ್ ಕಂಪನಿ ಹೇಳಿದೆ.
ಇನ್ನು 1865 ರ ಏಪ್ರಿಲ್ 14ರಂದು ರಾತ್ರಿ 11 ಗಂಟೆಗೆ ಲಿಂಕನ್ ಅವರ ಸಾವಿನ ಕುರಿತು ಅವರ ಯುದ್ಧ ವಿಭಾಗದ ಜೋರ್ಜ್ ಕಿನ್ನರ್ ಅವರು ಕೆಂಟುಕಿ ಲೆಕ್ಸಿಂಗ್ಟನ್ ಎಂಬ ಅಂಚೆ ಕಚೇರಿಯ ಮಾಸ್ಟರ್ ಆಗಿದ್ದ ಡಾ.ಟೊಡ್ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳಿಸಿದ್ದರು. ಅದರ ಪ್ರತಿಯನ್ನು ಸಂರಕ್ಷಿಸಲಾಗಿತ್ತು. 1999ರಲ್ಲಿ ಅದನ್ನು ಡಾ.ಟೊಡ್ ಅವರ ಕುಟುಂಬ ಆಕ್ಷನ್ ಕಂಪನಿಗೆ ಇವುಗಳನ್ನು ಮಾರಾಟ ಮಾಡಿತ್ತು.