ಯುನಿಕಾರ್ನ್ ಗೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಪ್ರಬಲವಾದ ಅಲೆಗಳ ಕಾರಣ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟಿದ್ದಾಳೆ.
ಅದೃಷ್ಟವಶಾತ್ ಆ ಬಾಲಕಿ ಗ್ರೀಕ್ ನೌಕೆಯೊಂದರ ಕಣ್ಣಿಗೆ ಬಿದ್ದಿದ್ದು, ಆಕೆಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.
ನಾಲ್ಕೈದು ವರ್ಷ ವಯಸ್ಸಿನ ಈ ಬಾಲಕಿ ತನ್ನ ಅಪ್ಪ-ಅಮ್ಮನೊಂದಿಗೆ ಆಂಟೀರಿಯೋ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಪ್ರಬಲವಾದ ಅಲೆಯೊಂದಕ್ಕೆ ಸಿಲುಕಿ, ಅರ್ಧ ಮೈಲಿಯಷ್ಟು ದೂರ ಹೋಗಿಬಿಟ್ಟಿದ್ದಾಳೆ. ತಕ್ಷಣವೇ ಆಕೆಯ ಹೆತ್ತವರು ಅಲ್ಲಿನ ಬಂದರಿನ ಸಿಬ್ಬಂದಿಯ ಗಮನಕ್ಕೆ ವಿಚಾರವನ್ನು ಮುಟ್ಟಿಸಿದ್ದಾರೆ.
ಬಂದರು ಅಧಿಕಾರಿಗಳು ಹತ್ತಿರದಲ್ಲಿದ್ದ ನೌಕೆಯ ಸಿಬ್ಬಂದಿಯನ್ನು ಸಂಪರ್ಕಿಸಿ ಬಾಲಕಿಯನ್ನು ರಕ್ಷಿಸಲು ಸಫಲರಾಗಿದ್ದಾರೆ. ಸಲಾಮಿನೋಮಾಚೋಸ್ ಹೆಸರಿನ ನೌಕೆಯ ಕ್ಯಾಪ್ಟನ್ ಗ್ರಿಗಾರಿಸ್ ಕರ್ನೇಸಿಸ್ ನೌಕೆಯನ್ನು ಬಾಲಕಿಯತ್ತ ತಕ್ಷಣವೇ ತಿರುಗಿಸಿ, ಆಕೆಯನ್ನು ಬಲೇ ನಾಜೂಕಾಗಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.