ಟೆಲಿವಿಷನ್ ಎಂಬುದು ಮಾಯಾಜಾಲ. ಅದು ಮಕ್ಕಳ ಮೇಲೆ ಒಳ್ಳೆಯ ಹಾಗೂ ಕೆಟ್ಟ ಎರಡೂ ಪರಿಣಾಮಗಳನ್ನು ಬೀರುತ್ತವೆ. ಸಿನೆಮಾಗಳು, ಜಾಹೀರಾತು, ಶೋಗಳನ್ನು ನೋಡಿದ ಮಕ್ಕಳು ಒಳ್ಳೆಯ ಅಂಶಗಳನ್ನು ಪಡೆದು ಕೆಟ್ಟ ಅಂಶಗಳನ್ನು ಬಿಡುವ ರೂಢಿ ಮಾಡಿಕೊಳ್ಳಬೇಕಿದೆ.
ಆದರೆ ಎಷ್ಟೋ ಬಾರಿ ಹಾಗಾಗದೇ ಮಕ್ಕಳು ತೊಂದರೆಗೆ ಸಿಲುಕುತ್ತಾರೆ. ಅಂಥದ್ದೇ ಒಂದು ಘಟನೆ ರಷ್ಯಾದಲ್ಲಿ ಬೆಳಕಿಗೆ ಬಂದಿದೆ. ಟಿವಿ ನೋಡಿಕೊಂಡು ಬಾಲಕನೊಬ್ಬ ಮಧ್ಯರಾತ್ರಿ ಮನೆ ಬಿಟ್ಟು ಹೋದ ಘಟನೆ ಮಾಸ್ಕೋದಲ್ಲಿ ನಡೆದಿದೆ.
ಅರ್ತ್ಯೊನ್ ಎಂಬ 5 ವರ್ಷದ ಬಾಲಕ ಟಿವಿಯಲ್ಲಿ ಬಂದ ಕೋಕಾ ಕೋಲಾ ಇರುವ ಸಿಂಗರಿಸಿದ ಟ್ರಕ್ ಹುಡುಕುತ್ತ ರಾತ್ರಿ ಹೊರಗೆ ಗೋಗಿದ್ದ. ಅದೂ 5 ಡಿಗ್ರಿ ಸೆಲ್ಸಿಯಸ್ ನ ಕೊರೆಯುವ ಛಳಿಯಲ್ಲಿ ಆತ ಅಂಡರ್ ವೇರ್ ಹಾಗೂ ಶೂ ಮಾತ್ರ ಹಾಕಿಕೊಂಡು ಮನೆಯಿಂದ ಹೊರ ಬಿದ್ದಿದ್ದ. ಮನೆಯಲ್ಲಿ ಒಟ್ಟು ಐವರು ಮಕ್ಕಳಿದ್ದುದರಿಂದ ಅರ್ತ್ಯೊನ್ ಹೊರ ಬಿದ್ದು ಹೋಗಿದ್ದು ಪಾಲಕರಿಗೂ ತಕ್ಷಣ ಗೊತ್ತಾಗಲೇ ಇಲ್ಲ.
ನಂತರ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಮೂರು ತಾಸಿನ ನಂತರ ಬಾಲಕನನ್ನು ಹುಡುಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತ ಬಸ್ ತಂಗುದಾಣ ಒಂದರ ಎದುರು ನಡುಗುತ್ತ ನಿಂತಿದ್ದ ಎನ್ನಲಾಗಿದೆ. ಆತ ಪೊಲೀಸರಿಗೆ ತನ್ನ ಹೆಸರನ್ನು ಮಾತ್ರ ಹೇಳಿದ, ಮನೆಯ ವಿಳಾಸವನ್ನೂ ಹೇಳಲು ಗೊತ್ತಾಗಲಿಲ್ಲ. ತಾನು ಟಿವಿ ಜಾಹೀರಾತಿನಲ್ಲಿ ನೋಡಿದ ಅಲಂಕರಿಸಿದ ಟ್ರಕ್ ಹಾಗೂ ಟ್ರೇನ್ ನೋಡಲು ಸಾಧ್ಯವಾಗಿಲ್ಲದ ಕಾರಣ ಬೇಸರಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.