ವುಹಾನ್: ಕೊರೊನಾ ಎಂಬ ವೈರಸ್ ಈ ವರ್ಷ ವಿಶ್ವದಾದ್ಯಂತ 1.7 ಲಕ್ಷ ಜನರ ಜೀವ ಬಲಿ ಪಡೆದಿದೆ. 74 ಲಕ್ಷ ಜನ ರೋಗಕ್ಕೆ ತುತ್ತಾಗಿದ್ದಾರೆ.
ಕೋವಿಡ್ ನಿಂದ ಚೇತರಿಸಿಕೊಂಡರೂ ಇನ್ನೆಷ್ಟೋ ಜನರ ಬದುಕು ಇನ್ನೂ ಸರಿ ದಾರಿಗೆ ಬಂದಿಲ್ಲ. ಹೀಗೆ ಕೊರೊನಾಕ್ಕೆ ತುತ್ತಾಗಿ ಚೇತರಿಸಿಕೊಂಡರೂ ಬದುಕು ಸರಿದಾರಿಗೆ ಬರದ ವುಹಾನ್ ದಂಪತಿಯ ಕರುಣಾಜನಕ ಕಥೆಯೊಂದು ಮನಕಲಕುವಂತಿದೆ.
ಚೀನಾದ ವುಹಾನ್ ನಗರದ 36 ವರ್ಷದ ಉದ್ಯಮಿ ಮಹಿಳೆ ಡುವಾನ್ ಲಿಂಗ್ ಹಾಗೂ ಅವರ ಪತಿ ಸರ್ಜನ್ ಫಾಂಗ್ ಯುಶುನ್ ದಂಪತಿ ಮದುವೆಯಾಗಿ ಹಲ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. 2020 ರಲ್ಲಿ ಅವರು ಅದಕ್ಕಾಗಿ ಚಿಕಿತ್ಸೆ ಪಡೆಯಲು ಯೋಜಿಸಿದ್ದರು. ಆದರೆ, ಕೊರೊನಾ ವೈರಸ್ ಅವರ ಕನಸನ್ನು ಹಾಗೇ ಉಳಿಸಿಬಿಟ್ಟಿದೆ. “ಲೈಫ್ ಈಸ್ ಶಾರ್ಟ್” ಎಂದು ಡುವಾನ್ ತಮ್ಮ ಬೇಸರ ಹಂಚಿಕೊಂಡಿದ್ದಾರೆ.
ಡುವಾನ್ ಅವರ ಪತಿ ಪಾಂಗ್ ಯುಶುನ್ ಪ್ರಸಿದ್ಧ ಸರ್ಜನ್. ಅಮೆರಿಕಾದಲ್ಲಿ ಓದಿ ಬಂದವರು. ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದರು. ಆಗ ವೈರಸ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಯಾವುದೇ ಸುರಕ್ಷತೆ ಇಲ್ಲದೇ ಹಲವರಿಗೆ ಚಿಕಿತ್ಸೆ ನೀಡಿದ್ದರು. ಕೆಲವೇ ದಿನದಲ್ಲಿ ಅವರಿಗೂ ಜ್ವರ ಕಾಣಿಸಿಕೊಂಡಿತ್ತು. ಅವರಿಂದ ಪತ್ನಿಗೂ ಜ್ವರ ಬಂತು.
ಯುಶುನ್ ಅವರು ಅನಾರೋಗ್ಯಕ್ಕೀಡಾದಾಗ ಫೆ.3. ಆಗಿನ್ನೂ ವುಹಾನ್ ನಲ್ಲಿ 420 ಕೋವಿಡ್ ಪ್ರಕರಣಗಳು ಮಾತ್ರ ಇದ್ದವು. ಯುಶುನ್ ಸುಮಾರು 2 ತಿಂಗಳು ಆಸ್ಪತ್ರೆಯಲ್ಲಿದ್ದು ಗುಣವಾದರು. ಪತ್ನಿ ಡುವಾನ್ ಕೂಡ ಗುಣವಾದರು. ಆದರೆ, ಯುಶುನ್ ಒಬ್ಬ ವೈದ್ಯರಾಗಿದ್ದರಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗಿಲ್ಲ. ಕರ್ತವ್ಯಕ್ಕೆ ತೆರಳಬೇಕಾಯಿತು.
“ಈಗ ಎಲ್ಲವೂ ಸರಿಯಾಗಿದ್ದರೂ ಯುಶುನ್ ಅವರಿಂದ ಮತ್ತೆ ರೋಗ ಬರಬಹುದು ಎಂಬ ಆತಂಕದಿಂದ ಸ್ನೇಹಿತರು ಮತ್ತು ಅಕ್ಕಪಕ್ಕದವರು ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ನಾವೂ ಹೊರಗೆ ಓಡಾಟ ಕಡಿಮೆ ಮಾಡಿದ್ದೇವೆ” ಎಂದು ವೈದ್ಯರ ಪತ್ನಿ ಡುವಾನ್ ಬೇಸರದಿಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ.