ವನ್ಯಜೀವಿಗಳ ವಿಡಿಯೋಗಳು ಬಂದರೆ ಪ್ರತಿ ಬಾರಿಯೂ ಅವು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವುದು ನಾವೆಲ್ಲ ನೋಡಿದ್ದೇವೆ. ಚಿರತೆ ಹಾಗೂ ಹೆಬ್ಬಾವು ನಡುವೆ ನಡೆದಿರುವ ಭಾರಿ ಹೋರಾಟದ ವಿಡಿಯೊ ಇದೀಗ ಭಾರಿ ವೈರಲ್ ಆಗಿದೆ.
ಕಳೆದ ಬಾರಿ ಹುಲಿಯೊಂದು ಹೆಬ್ಬಾವಿಗೆ ಜಾಗ ಬಿಡುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಅದರಲ್ಲಿ, ಹುಲಿ ಹೋಗುತ್ತಿದ್ದ ದಾರಿಯಲ್ಲಿ ಹೆಬ್ಬಾವಿತ್ತು. ಇದನ್ನು ಕಂಡ ಹುಲಿ ಇನ್ನೊಂದು ದಾರಿ ಹುಡುಕುತ್ತ ಪಕ್ಕಕ್ಕೆ ಸರಿಯಿತು. ಆದರೀಗ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಾಕಿರುವ ಚಿರತೆ-ಹೆಬ್ಬಾವಿನ ಕಾಳಗದ ವಿಡಿಯೊ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ನಂದಾ ಅವರು ಹಾಕಿರುವ ವಿಡಿಯೊ ದಕ್ಷಿಣ ಆಫ್ರಿಕಾದ ಕ್ರೂಗೆರ್ ರಾಷ್ಟ್ರೀಯ ಉದ್ಯಾನವನದಲ್ಲಿ 2012ರಲ್ಲಿ ಸೆರೆ ಸಿಕ್ಕಿರುವ ವಿಡಿಯೊ ಆಗಿದೆ. ದಾರಿಯಲ್ಲಿ ಮಲಗಿರುವ ಹೆಬ್ಬಾವಿನ ಬಳಿ ಹೋದ ಚಿರತೆ, ಅದನ್ನು ಸೂಕ್ಷ್ಮವಾಗಿ ಗಮನಿಸಿದೆ. ಬಳಿಕ ಹೆಬ್ಬಾವಿನ ಮೇಲೆ ದಾಳಿ ಮಾಡಲು ಮುಂದಾಗಿದೆ. ಆರಂಭದಲ್ಲಿ ಹೆಬ್ಬಾವು ಪ್ರತಿರೋಧ ಹೊರಹಾಕಿದರೂ, ಬಳಿಕ ಹೆಬ್ಬಾವಿನ ಕುತ್ತಿಗೆಗೆ ಚಿರತೆ ಬಾಯಿ ಹಾಕಿದೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಎಂಟು ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೊವನ್ನು ನೋಡಿದ್ದಾರೆ. ಅನೇಕರು ಈ ವಿಡಿಯೊ ನೋಡಿ ಅಚ್ಚರಿಯ ಜತೆ ಜತೆಗೆ ಗಾಬರಿ ಬಿದ್ದಿದ್ದಾರೆ.