ಇತ್ತೀಚೆಗೆ ಲೆಬನಾನ್ ನ ಬೈರೂತ್ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಆಘಾತದಿಂದ ಹೊರಬರಲು ಲೆಬನಾನಿಗಳು ಹರಸಾಹಸಪಡುತ್ತಿದ್ದಾರೆ.
ಅಷ್ಟರಲ್ಲಾಗಲೇ ಲೆಬನಾನ್ ಅಧ್ಯಕ್ಷರ ವಿರುದ್ಧ ಚಹಾ ಕಳ್ಳತನದ ಆರೋಪ ಎರಗಿದ್ದು, ಸಂತ್ರಸ್ತರಿಗೆ ಟೀ ಪುಡಿ ಕೊಡುವ ಬದಲು ಆಪ್ತ ವಲಯಕ್ಕಷ್ಟೇ ಹಂಚಿಕೊಂಡು ಮೋಸ ಮಾಡಿದ್ದಾರೆ ಎಂಬ ದೂರು ಶುರುವಾಗಿದೆ.
ಸ್ಫೋಟ ಪ್ರಕರಣದಲ್ಲಿ 190 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲೆಬನಾನ್ ನಲ್ಲಿ ಶ್ರಮಿಕ ವರ್ಗದವರೆಂದರೆ ಅದು ಶ್ರೀಲಂಕಾದ ಜನರು. ಲೆಬನಾನ್ ನಲ್ಲಿರುವ ವಲಸಿಗರ ಪೈಕಿ ಶ್ರೀಲಂಕಾದವರೇ ಹೆಚ್ಚು.
ಈ ಪ್ರಕರಣದ ನಂತರ ಲೆಬನಾನ್ ಗೆ ಜಗತ್ತಿನ ಅನೇಕ ರಾಷ್ಟ್ರಗಳು ನೆರವು ನೀಡಿದ್ದು, ಶ್ರೀಲಂಕಾ ಕೂಡ ನೆರವಿನ ಹಸ್ತ ಚಾಚಿದೆ. ಆಗಸ್ಟ್ 24 ರಂದು ಫೋಟೋವೊಂದನ್ನು ಪೋಸ್ಟ್ ಮಾಡಿದ್ದ ಲೆಬನಾನ್ ಅಧ್ಯಕ್ಷರ ಕಾರ್ಯಾಲಯವು, ಶ್ರೀಲಂಕಾ ರಾಯಭಾರಿಯಿಂದ ಟೀ ಪುಡಿ ಪಡೆಯುತ್ತಿರುವುದೂ ಅಲ್ಲದೆ, ಬೈರೂತ್ ಸ್ಫೋಟ ಪ್ರಕರಣದ ಸಂತ್ರಸ್ತರಿಗಾಗಿ 1675 ಕೆಜಿ (3685 ಪೌಂಡ್) ಸಿಲೋನ್ ಟೀ ಪುಡಿ ಕೊಟ್ಟಿರುವುದಾಗಿ ಹೇಳಿಕೊಂಡಿತ್ತು.
ಇದಾದ ಬಳಿಕ ಸಂತ್ರಸ್ತರಿಗೆ ಟೀ ಪುಡಿ ಸಿಗಲಿಲ್ಲ. ಈ ಕುರಿತು ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಮತ್ತೊಂದು ಪೋಸ್ಟ್ ಸಿಕ್ಕಿತ್ತು. ಸ್ವತಃ ಲೆಬನಾನ್ ಅಧ್ಯಕ್ಷ ಮೈಕಲ್ ಅವೋನ್ ಅವರೇ ಹಾಕಿರುವ ಪೋಸ್ಟ್ ಪ್ರಕಾರ, ಶ್ರೀಲಂಕಾವು ಉಡುಗೊರೆಯಾಗಿ ನೀಡಿದ ಸಿಲೋನ್ ಟೀ ಪುಡಿಯನ್ನು ನಮ್ಮ ಸೇನೆ ಸ್ವೀಕರಿಸಿದೆ. ಅಧ್ಯಕ್ಷರ ಭದ್ರತೆಗಾಗಿ ಇರುವ ಸಿಬ್ಬಂದಿಯ ಕುಟುಂಬಕ್ಕೆ ಟೀ ಪುಡಿ ತಲುಪಿದೆ. ಧನ್ಯವಾದ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ಕಂಡು ಕೆಂಡಾಮಂಡಲರಾದ ಲೆಬನಾನಿಗಳು, ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದು, ಟೀ ಪುಡಿ ಕಳ್ಳ ಎಂದು ಜರಿದಿದ್ದಾರೆ.