ಡೊನಾಲ್ಡ್ ಟ್ರಂಪ್ರ ಬೆಂಬಲಿಗರು ಬುಧವಾರ ಅಮೆರಿಕ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಹಿಂಸಾಚಾರ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಈ ಗಲಭೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಮಾತ್ರವಲ್ಲದೇ ಅನೇಕರು ಗಾಯಗೊಂಡಿದ್ದಾರೆ.
ಕ್ಯಾಪಿಟಲ್ ಕಟ್ಟಡದಲ್ಲಿ ನಡೆಯುತ್ತಿದ್ದ ಗಲಭೆಯನ್ನ ಅನೇಕ ಗಲಭೆಕೋರರು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ನೇರ ಪ್ರಸಾರ ಮಾಡುತ್ತಿದ್ದರು. ಇದು ಮಾತ್ರವಲ್ಲದೇ ಗಲಭೆಯಲ್ಲಿ ಭಾಗಿಯಾಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ಗೆ ಬೆಂಬಲ ಸೂಚಿಸುತ್ತಿದ್ದರು. ಇದೇ ರೀತಿ ಕೆಲಸ ಮಾಡಲು ಹೋದ ಪಾಲ್ ಡೇವಿಸ್ ಎಂಬ ವ್ಯಕ್ತಿ ಇದೀಗ ಭಾರೀ ದಂಡ ತೆತ್ತಿದ್ದಾರೆ.
ಸಲೂನ್ ವರದಿಗಾರ ರೋಜರ್ ಸೋಲೆನ್ ಬರ್ಗರ್ ಪಾಲ್ ಡೇವಿಸ್ರ ಲೈವ್ ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದ ಹಾಗೆ ಈ ಪಾಲ್ ಡೇವಿಸ್ ಟೆಕ್ಸಾಸ್ನ ವಿಮಾ ವಕೀಲರಾಗಿದ್ದಾರೆ. ಗಲಭೆಯಲ್ಲಿ ಭಾಗಿಯಾಗಿದ್ದರ ಪರಿಣಾಮ ಡೇವಿಸ್ರನ್ನ ಕೆಲಸದಿಂದ ತೆಗೆದು ಹಾಕಲಾಗಿದೆ.
ವಿಡಿಯೋದಲ್ಲಿ ಡೇವಿಸ್, ಇಂದು ಅಶ್ರುವಾಯು ದಾಳಿಗೆ ಒಳಗಾದೆವು. ಇದೂ ಕೂಡ ಒಂದು ಅನುಭವ. ನಾವು ಮತಪತ್ರಗಳನ್ನ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಇದನ್ನ ಮಾಡಲು ಒಂದು ಮಾರ್ಗವಿದೆ. ಇದನ್ನ ಎರಡು ದಿನಗಳಲ್ಲಿ ಪರಿಹರಿಸಬಹುದು. ಇದು ನ್ಯಾಯಸಮ್ಮತ ಚುನಾವಣೆ ಆಗಿದ್ದರೆ ಮತ ಪತ್ರಗಳನ್ನ ಮರುಪರಿಶೀಲನೆ ಮಾಡೋಣ. ಬಿಡನ್ ಗೆದ್ದರೆ ಎಲ್ಲರೂ ನಮ್ಮ ಜೀವನವನ್ನ ಮುಂದುವರಿಸೋಣ. ಆದರೆ ಅವರು ಮತಯಂತ್ರಗಳ ಪರಿಶೀಲನೆ ಅವಕಾಶ ನೀಡುತ್ತಿಲ್ಲ. ಇದನ್ನ ತಡೆಯಲು ನಾವು ಕ್ಯಾಪಿಟಲ್ಗೆ ನುಗ್ಗಲು ಯತ್ನಿಸುತ್ತಿದ್ದೇವೆ. ಆದರೆ ನಮಗೆ ಒಳ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
https://twitter.com/i/status/1346982504088154113