ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ.
ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಆಹಾರದ ವ್ಯವಸ್ಥೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡುವ ಮೂಲಕ ಭಾರತೀಯ ನಾಗರಿಕರು ಅನ್ನದಾತರಿಗೆ ಸಾಥ್ ನೀಡಿದ್ದರು.
ಇದರ ಜೊತೆಯಲ್ಲಿ ಅಮೆರಿಕ, ಕೆನಡಾ, ಯುಕೆ ಸೇರಿದಂತೆ ವಿವಿಧೆಡೆ ನೆಲೆಸಿರುವ ಲಕ್ಷಕ್ಕೂ ಹೆಚ್ಚು ಭಾರತೀಯರು ರೈತರ ಪರ ಪಿಟೀಷನ್ಗೆ ಸಹಿ ಹಾಕುವ ಮೂಲಕ ನಮ್ಮ ಬೆಂಬಲ ಅನ್ನದಾತರಿಗೆ ಎಂದಿದ್ದಾರೆ.
ಕಳೆದ ವಾರ ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾನೂನನ್ನ ರದ್ದುಪಡಿಸುವಂತೆ ಆಗ್ರಹಿಸಿ ಪಂಜಾಬ್ , ಹರಿಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿ ಚಲೋ ನಡೆಸಿದ್ದರು.
ಈ ವೇಳೆ ರೈತರು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು. ಪ್ರತಿಭಟನೆ ನಡೆಸಿದ ರೈತರ ಮೇಲೆ ಅಶ್ರವಾಯು, ಜಲಫಿರಂಗಿ, ಲಾಠಿ ಚಾರ್ಜ್ ಮಾಡಲಾಗಿದ್ದು ಫೋಟೋಗಳು ವೈರಲ್ ಆಗಿದ್ದವು.
ಈ ಫೋಟೋಗಳನ್ನ ನೋಡಿದ ವಿದೇಶದಲ್ಲಿರುವ ಭಾರತೀಯರು ರೈತರ ಪರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ರೈತರಿಗೆ ನ್ಯಾಯ ನೀಡಬೇಕೆಂದು ಸಿದ್ಧಪಡಿಸಲಾಗಿರುವ ಪಿಟೀಷನ್ಗೆ ಎರಡೂವರೆ ಲಕ್ಷಕ್ಕೂ ಹೆಚ್ಚು ಮಂದಿಯ ಆನ್ಲೈನ್ ಸಹಿ ಬಿದ್ದಿದೆ.