ಲಾಸ್ ಎಂಜಲೀಸ್: ಮುಂದಿನ ಅಮೆರಿಕಾ ಅಧ್ಯಕ್ಷ ತಾವೇ ಎಂದು ಹೇಳಿಕೊಂಡಿರುವ ಪ್ರಸಿದ್ಧ ರ‍್ಯಾಪರ್ ಕಾನ್ಯೆ ವೆಸ್ಟ್ ತಮಗೆ ತಾವೇ ಮತ ಹಾಕಿಕೊಳ್ಳುವ ಫೋಟೋ ಸಖತ್ ವೈರಲ್ ಆಗಿದೆ.
ಅಷ್ಟೇ ಅಲ್ಲ, ಈ ಬಗ್ಗೆ ರಾಶಿರಾಶಿ ತಮಾಷೆಯ ಮಿಮ್ಸ್‌ಗಳ ಹೊಳೆ ಜಾಲತಾಣಗಳಲ್ಲಿ ಹರಿದಿದೆ. ಅಧ್ಯಕ್ಷೀಯ ಚುನಾವಣೆ ಮುಗಿದಿದ್ದರೂ ಜಾಲತಾಣಗಳಲ್ಲಿ ಕಾನ್ಯೆ ವೆಸ್ಟ್ ಕಾಲೆಳೆಯುವುದು ಮುಗಿಯುವಂತೆ ಕಾಣುತ್ತಿಲ್ಲ.
ಕಾನ್ಯೆ ವೆಸ್ಟ್ ಚುನಾವಣೆ ನಕ್ಷೆಯ ಎದುರು ನಿಂತಿರುವ ಫೋಟೋ ಟ್ವೀಟ್ ಮಾಡಿ “ವೆಲ್ಪ್ ಕಾನ್ಯೆ ವೆಸ್ಟ್ -2024” ಎಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ತಾವು ಮೊದಲ ಬಾರಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಕಾನ್ಯೆ ತಾವು ಅಮೆರಿಕಾ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಎಂದು ಕಳೆದ ಜೂನ್‌ನಲ್ಲಿ ಪ್ರಚಾರ ಆರಂಭಿಸಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ ತಮ್ಮ ಕ್ಯಾಂಪೇನಿಂಗ್‌ಗಾಗಿ ಅವರು 6.7 ಮಿಲಿಯನ್ ಡಾಲರ್ ಖರ್ಚು ಮಾಡಿದ್ದರು.
ಫ್ಲೋರಿಡಾ, ಪೆನ್ಸಲ್ವೇನಿಯಾ ಮಿಚಿಗನ್ ಸೇರಿ 12 ರಾಜ್ಯಗಳ ಅಧ್ಯಕ್ಷೀಯ ಚುನಾವಣೆಯ ಆಕಾಂಕ್ಷಿಗಳ ಬ್ಯಾಲೆಟ್ ಪೇಪರ್‌ನಲ್ಲಿ ಕಾನ್ಯೆ ಅವರ ಹೆಸರು ಬಂದಿತ್ತು. ಅವರಿಗೆ 50 ಸಾವಿರ ಮತಗಳು ಬಿದ್ದಿವೆ. ಅಚ್ಚರಿ ಎಂದರೆ ಅವರ ಪತ್ನಿಯೇ ಅವರಿಗೆ ಬೆಂಬಲ ನೀಡಿರಲಿಲ್ಲ.
ಕಾನ್ಯೆ ಮಂಗಳವಾರ ಮತದಾನದ ಪೋಸ್ಟ್ ಮಾಡುತ್ತಿದ್ದಂತೆ ಒಬ್ಬ ಟ್ವಿಟರ್ ಬಳಕೆದಾರರೊಬ್ಬರು, ‘40ಕ್ಕೂ ಹೆಚ್ಚು ವರ್ಷದ ನೀವು ಮೊದಲ ಬಾರಿ ಮತದಾನ ಮಾಡುತ್ತಿದ್ದೀರಿ ಅದು ಸ್ವತಃ ನಿಮಗೇ ಎಂಬುದು ಮುಜುಗರವಲ್ಲವೇ..?’ ಎಂದು ಪ್ರಶ್ನಿಸಿ ಕಾನ್ಯೆ ಕಾಲೆಳೆದಿದ್ದಾರೆ. “ಕಾನ್ಯೆ ವೆಸ್ಟ್‌ಗೆ ಮತದಾನ ಮಾಡಿದ 50 ಸಾವಿರ ಜನರ ಮೇಲೆ ಕರೊನಾ ವೈರಸ್ ಲಸಿಕೆಯ ಪರೀಕ್ಷೆ ಮಾಡಬೇಕು” ಎಂದು ಇನ್ನೊಬ್ಬರು ಕಿಚಾಯಿಸಿದ್ದಾರೆ. ಅಷ್ಟೇ ಅಲ್ಲ, ಪ್ರಸಿದ್ಧ ಕಾರ್ಟೂನ್ ಚಿತ್ರಗಳ ದೃಶ್ಯಗಳನ್ನು ಬಳಸಿಕೊಂಡು ಸಾಕಷ್ಟು ಮಿಮ್ಸ್‌ಗಳನ್ನು ಮಾಡಿ ಹರಿಬಿಡಲಾಗಿದೆ.
https://twitter.com/brochupanties/status/1323804726689935365?ref_src=twsrc%5Etfw%7Ctwcamp%5Etweetembed%7Ctwterm%5E1323804726689935365%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fkanye-west-votes-for-himself-in-us-presidential-elections-he-actually-ran-ask-netizens%2F677252