ನ್ಯೂಯಾರ್ಕ್: ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್)ದಲ್ಲಿ ಚುನಾವಣೆಯ ಸಿದ್ಧತೆ ನಡೆದಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಪ್ರಸಿದ್ಧ ರ‍್ಯಾಪರ್ ಕಾನ್ಯೆ ವೆಸ್ಟ್ 14 ಸೆಕೆಂಡ್ ವಿಳಂಬವಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದು, ಸ್ವೀಕೃತಿಯ ಬಗ್ಗೆ ಅನುಮಾನ ಪ್ರಾರಂಭವಾಗಿದೆ.
ಯುಎಸ್ ಚುನಾವಣಾ ಆಯೋಗ 5 ಗಂಟೆಗೂ ಮುಂಚಿತವಾಗಿ ನಾಮಪತ್ರ ಸಲ್ಲಿಸಬೇಕು ಎಂದು ಸೂಚಿಸಿದೆ. ಆದರೆ, ಕಾನ್ಯೆ ವೆಸ್ಟ್ ಅವರ ಕ್ಯಾಂಪೇನಿಂಗ್ ಮ್ಯಾನೇಜರ್ 14 ಸೆಕೆಂಡ್ ವಿಳಂಬವಾಗಿ ನಾಮಪತ್ರ ಹಾಗೂ 23 ಪೇಜ್‌ಗಳ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
‘ಸಂವಿಧಾನದಲ್ಲಿ ನಿಮಿಷ ಹಾಗೂ ಸೆಕೆಂಡ್‌ಗಳನ್ನು ಪ್ರತ್ಯೇಕ ಮಾಡಿಲ್ಲ. ನಾಮಪತ್ರವನ್ನು 5 ಗಂಟೆಯ ನಂತರ ಸಲ್ಲಿಸಬಾರದು ಎಂದು ಹೇಳಲಾಗಿದೆ. ಅಂದರೆ ಐದು ಗಂಟೆ ಒಂದು ನಿಮಿಷದ ಒಳಗಾಗಿ ನಾವು ಸಲ್ಲಿಸಬೇಕು. ನಾವು ಆ ರೀತಿ ಮಾಡಿದ್ದೇವೆ’ ಎಂದು ಕಾನ್ಯೆ ವೆಸ್ಟ್ ಅವರ ವಕೀಲ ಮೈಕಲ್ ಕರನ್ ಹೇಳಿದ್ದಾರೆ. ಅಲ್ಲದೆ, ಈ ವಿಳಂಬಕ್ಕೆ ಐ ಫೋನ್ ಕೂಡ ಕಾರಣ ಎಂದು ಅವರು ಹೇಳಿದ್ದಾರೆ. ‘ಐಫೋನ್ ಸಮರ್ಪಕವಾಗಿ ಸಮಯವನ್ನು ಟ್ರ್ಯಾಕ್ ಮಾಡಿಲ್ಲ’ ಎಂದು ಕರನ್ ದೂರಿದ್ದಾರೆ.
ವೆಸ್ಟ್ ಅವರ ಸ್ಪರ್ಧೆಯ ಹಾಗೂ ನಾಮಪತ್ರದ ಬಗ್ಗೆ ಡೆಮೊಕ್ರೆಟಿಕ್ ಪಾರ್ಟಿಯ ಮುಖಂಡರು ಆಕ್ಷೇಪಣೆ ಎತ್ತಿದ್ದಾರೆ. ಅವರ ನಾಮಪತ್ರದಲ್ಲಿರುವ ಮಿಕಿ ಮೌಸ್ ಹಾಗೂ ಬ್ರಿಯಾನ್ ಸ್ಯಾಂಡರ್ಸ್ ಎಂಬುವವರ ಸಹಿಗಳು ನಕಲಿಯಾಗಿವೆ ಎಂದು ದೂರಿದ್ದಾರೆ. ಸಹಿಗಳು ನಕಲಿಯಾಗಿದ್ದರೆ ನಾಮಪತ್ರ ತಿರಸ್ಕಾರ ಮಾಡಲಿ ಎಂದು ಕಾನ್ಯೆ ವೆಸ್ಟ್ ಅವರ ವಕೀಲ ಕರನ್ ಎದುರಾಳಿಗಳಿಗೆ ಸವಾಲು ಹಾಕಿದ್ದಾರೆ.