ವಾಷಿಂಗ್ಟನ್: ಬಹು ಕುತೂಹಲ ಕೆರಳಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ರೊಬಿನೆಟ್ಟೆ ಬಿಡೆನ್ (ಜೋ ಬಿಡೆನ್) ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಗಾದಿಯನ್ನು ಹಿಡಿಯಲು ಅರ್ಹರಾಗಿದ್ದಾರೆ.
2021 ರ ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಬಿಡೆನ್ ಪದಗ್ರಹಣ ಸಮಾರಂಭ ನಡೆಯಲಿದೆ. ನಂತರ 77 ವರ್ಷದ ಬಿಡೆನ್ ಅವರು ವೈಟ್ ಹೌಸ್ ಗೆ ತಮ್ಮ ಪತ್ನಿ ಜಿಲ್ ಅವರ ಜತೆ ಬಂದು ವಾಸ ಮಾಡಲಿದ್ದಾರೆ. ಅವರಿಬ್ಬರೊಟ್ಟಿಗೆ ಇನ್ನೂ ಇಬ್ಬರು ವೈಟ್ ಹೌಸ್ ಸೇರಲಿದ್ದಾರೆ.
ಚಾಂಪ್ ಮತ್ತು ಮೇಜರ್ ಎಂಬುವವರು ವೈಟ್ ಹೌಸ್ ಗೆ ಬರಲಿದ್ದಾರೆ. ಇಬ್ಬರೂ ಬಿಡೆನ್ ಮಕ್ಕಳಲ್ಲ. ಮಕ್ಕಳಂತೆ ಸಾಕಿದ ಪ್ರೀತಿಯ ನಾಯಿಗಳು. ಚಾಂಪ್ 2008 ರಿಂದಲೂ ಬಿಡೆನ್ ಕುಟುಂಬದ ಸದಸ್ಯ. ಮೇಜರ್ ಎಂಬ ಜರ್ಮನ್ ಶಫರ್ಡ್ ನಾಯಿ 2018 ರಲ್ಲಿ ಬಿಡನ್ ಕುಟುಂಬಕ್ಕೆ ಸೇರ್ಪಡೆಯಾಗಿದೆ.
ಮೇಜರ್ ವೈಟ್ ಹೌಸ್ ಸೇರುತ್ತಿರುವ ಮೊದಲ ರೆಸ್ಕ್ಯೂ ಡಾಗ್. ಬಿಡನ್ ಅಮೆರಿಕಾದ ಅಧ್ಯಕ್ಷ ಚುನಾವಣೆ ಗೆಲ್ಲುತ್ತಿದ್ದಂತೆ ಟ್ವಿಟರ್ ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ಈ ಎರಡು ನಾಯಿಗಳ ಫೋಟೋ ಸಖತ್ ವೈರಲ್ ಆಗಿದೆ.