ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಭರಾಟೆಯಲ್ಲಿರುವ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಜನಾಂಗೀಯ ದ್ವೇಷದ ಭಾಷಣದ ಕಾರಣ ಭಾರತೀಯ-ಅಮೆರಿಕನ್ನರ ಮೇಲೆ ಜನಾಂಗೀಯ ದ್ವೇಷಕ್ಕೆ ಇನ್ನಷ್ಟು ಕುಮ್ಮಕ್ಕು ಕೊಟ್ಟಂತಾಗಿದೆ ಎಂದು ಆಪಾದಿಸಿದ ಬಿಡೆನ್, ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಯಾಗಿರುವ ಕಮಲಾ ಹ್ಯಾರೀಸ್‌ರ ಭಾರತೀಯ ಮೂಲದ ಬಗ್ಗೆ ಮಾತನಾಡುತ್ತಾ, ಆಕೆಯ ಜೀವನಗಾಥೆ ಭಾರತೀಯರೆಲ್ಲ ಜೀವನಗಾಥೆಯಂತೆಯೇ ಇದೆ ಎಂದಿದ್ದಾರೆ.
ತಾವೇನಾದರೂ ಗದ್ದುಗೆಗೆ ಬಂದಲ್ಲಿ ಭಾರತದೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಇನ್ನಷ್ಟು ಸಕ್ರಿಯವಾಗಿ ಭಾಗಿಯಾಗಿ, ಚೀನಾಗೆ ಪ್ರತಿಯಾಗಿ ದೆಹಲಿಗೆ ನೆರವಾಗುವುದಾಗಿ ಬಿಡೆನ್ ಭಾರತೀಯ ಸಮುದಾಯಕ್ಕೆ ತಿಳಿಸಿದ್ದಾರೆ.
ಮಾರುಕಟ್ಟೆಗಳನ್ನು ಮುಕ್ತವಾಗಿರಿಸುವ ಮೂಲಕ ಅಮೆರಿಕ ಹಾಗೂ ಭಾರತದಲ್ಲಿ ಮಧ್ಯಮ ವರ್ಗದ ಜನಸಂಖ್ಯೆಯನ್ನು ಇನ್ನಷ್ಟು ವರ್ಧಿಸುವುದಾಗಿ ತಿಳಿಸಿದ ಬಿಡೆನ್, ಹವಾಮಾನ ಬದಲಾವಣೆ, ಜಾಗತಿಕ ಆರೋಗ್ಯ, ಭಯೋತ್ಪಾದನೆ ಹಾಗೂ ಅಣ್ವಸ್ತ್ರ ಪ್ರಸರಣ ತಡೆ ಸೇರಿದಂತೆ ಅನೇಕ ವಿಷಯಗಳಲ್ಲಿ ಭಾರತದೊಂದಿಗೆ ಇನ್ನಷ್ಟು ನಿಕಟವಾಗಿ ಕೆಲಸ ಮಾಡಲು ಉತ್ಸುಕರಿರುವುದಾಗಿ ತಿಳಿಸಿದ್ದಾರೆ.