
ಜಗತ್ತಿನ ಇತರೆಡೆಗಳ ಜನಸಂಖ್ಯೆಯ ಸರಾಸರಿ ಜೀವಿತಾವಧಿ 72.6 ವರ್ಷಗಳಿದ್ದರೆ ಜಪಾನ್‌ನಲ್ಲಿ 84 ವರ್ಷಗಳಷ್ಟಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಒಕ್ಕೂಟ (ಒಇಸಿಡಿ) ವರದಿ ಮಾಡಿದೆ.
ದ್ವೀಪರಾಷ್ಟ್ರದ ಸದ್ಯದ ಜನಸಂಖ್ಯೆಯ 29%ನಷ್ಟು ಮಂದಿ 65 ವರ್ಷ ಮೇಲ್ಪಟ್ಟವರಾಗಿದ್ದು, ಅತ್ಯಧಿಕ ಶತಾಯುಷಿಗಳನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಲೇ ಬಂದಿದೆ. ಆರೋಗ್ಯವಂತ ಹಿರಿಯ ನಾಗರಿಕರ ಸಮುದಾಯ ಜಪಾನ್‌ನಲ್ಲಿ ದಿನೇ ದಿನೇ ವರ್ಧನೆಯಾಗುತ್ತಲೇ ಇದೆ.
ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಶ್ರೇಯ ಹೊಂದಿರುವ 117 ವರ್ಷದ ಟನಾಕಾ ಕಾನೆ ಜಪಾನ್‌ನವರೇ ಆಗಿದ್ದಾರೆ.
ಜಪಾನೀಯರ ಸುದೀರ್ಘ ಜೀವಿತಾವಧಿಯ ಹಿಂದಿನ ಗುಟ್ಟು ಅವರ ಪಥ್ಯವಾಗಿದೆ. ಸಮತೋಲಿತ ಪಥ್ಯದೊಂದಿಗೆ, ನಿರಂತರ ವ್ಯಾಯಾಮ ಹಾಗೂ ಉತ್ತಮವಾದ ಸ್ವಾಸ್ಥ್ಯ ಕಾಪಾಡಿಕೊಳ್ಳುವುದನ್ನು ಮಕ್ಕಳಿಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹೇಳಿಕೊಡುವುದು ಅಲ್ಲಿನ ಶಿಕ್ಷಣ ನೀತಿಯ ಭಾಗವಾಗಿದೆ. ಈ ಕಾರಣದಿಂದ ಜಪಾನ್‌ನ ನಾಗರಿಕರಿಗೆ ಸಕಾರಾತ್ಮಕ ಲೈಫ್‌ಸ್ಟೈಲ್ ಅಳವಡಿಸಿಕೊಳ್ಳುವುದು ತನ್ನಿಂತಾನೇ ಮೈಗೂಡುವಂತೆ ಆಗಿದೆ.