ಕೊರೊನಾ ಸೋಂಕು ತಗುಲಿದ್ದ 86 ವರ್ಷದ ವೃದ್ಧೆಗೆ ಕೈಗಳಲ್ಲಿನ ಮೂರು ಬೆರಳುಗಳನ್ನೇ ಕತ್ತರಿಸಲಾಗಿದೆ. ರಕ್ತನಾಳದ ಮೇಲೆ ಪ್ರಭಾವ ಬೀರಿದ ವೈರಾಣು, ಬೆರಳನ್ನು ಕಪ್ಪಾಗಿಸಿದ್ದು, ಜೀವಕೋಶಗಳನ್ನೇ ನಿಷ್ಕ್ರಿಯಗೊಳಿಸಿತ್ತು.
ಯೂರೋಪಿನ ವೈದ್ಯಕೀಯ ಜರ್ನಲ್ ಒಂದರಲ್ಲಿ ಈ ಬಗ್ಗೆ ಪ್ರಕಟವಾಗಿದ್ದು, ಇಟಲಿಯ ವೈದ್ಯರು ಇದನ್ನು ಕೊರೊನಾ ವೈರಾಣುವಿನ ತೀವ್ರ ಸ್ವರೂಪ ಎಂದು ಕರೆದಿದ್ದಾರೆ. ಇದೇ ರೀತಿಯ ಲಕ್ಷಣಗಳು ಅನೇಕರಲ್ಲಿ ಪತ್ತೆಯಾಗಿದೆ.
ಇಟಲಿ ಮೂಲದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದು, ರೋಗದ ಲಕ್ಷಣಗಳೇನೂ ಇರಲಿಲ್ಲ. ಆದರೆ, ಧಮನಿಗಳಲ್ಲಿ ರಕ್ತ ಹರಿಯದೆ ಹೆಪ್ಪುಗಟ್ಟಲು ಆರಂಭವಾಯಿತು. ಬಲಗೈನ ಎರಡು, ನಾಲ್ಕು ಮತ್ತು ಐದನೇ ಬೆರಳು ಗ್ಯಾಂಗ್ರೀನ್ ಗೆ ತುತ್ತಾದ್ದರಿಂದ ಕತ್ತರಿಸಲೇಬೇಕಾಯಿತು.
ಅನೇಕ ಕೊರೊನಾ ಸೋಂಕಿತರ ರಕ್ತದ ಹರಿವಿನಲ್ಲಿ ವ್ಯತ್ಯಯವಾಗಿದ್ದು, ಹೃದಯಕ್ಕೆ ರಕ್ತ ಪೂರೈಕೆ ಆಗದ ಪ್ರಕರಣಗಳು ಪತ್ತೆಯಾಗಿವೆ. ರಕ್ತ ಹೆಪ್ಪುಗಟ್ಟಿ ಅಂಗಕ್ಷಯವಾಗುತ್ತಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.